ಬಿಎಸ್‌ಎನ್‌ಎಲ್ ಹೊಸ ಪ್ಲಾನ್ ಬಿಡುಗಡೆಗೊಳಿಸಿದ ಬಾಬಾ ರಾಮ್‌ದೇವ್

Update: 2018-07-22 14:51 GMT

ಬೆಂಗಳೂರು, ಜು.22: ಯೋಗಗುರು ಬಾಬಾ ರಾಮ್‌ದೇವ್ ಹಾಗೂ ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್.ಮಣಿ ಅವರು ನಗರದ ಅರಮನೆ ಮೈದಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ‘ಬಿಎಸ್‌ಎನ್‌ಎಲ್’ನ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದರು.

ಬಿಎಸ್‌ಎನ್‌ಎಲ್‌ನವರು ಕಾಮನ್ ಯೂಸೇಜ್ ಗ್ರೂಪ್ ಯೋಜನೆಯಡಿ ನೂರಾರು, ಸಾವಿರಾರು ಮಂದಿಯನ್ನು ಒಳಗೊಂಡ ಸಮೂಹಗಳಿಗೆ ವಿಶೇಷ ಪ್ಲಾನ್ ರೂಪಿಸಿ ನೀಡುತ್ತಿದೆ. ಅದರಂತೆ ಪತಂಜಲಿ ಸಂಸ್ಥೆಗೆಂದೇ ಪ್ಯಾನ್ ಭಾರತ್ ಯೋಜನೆಯನ್ನು ಕಳೆದ ಮೇ ತಿಂಗಳಲ್ಲಿ ಹರಿದ್ವಾರದಲ್ಲಿ ಆರಂಭಿಸಲಾಗಿತ್ತು. ಮಹಾರಾಷ್ಟ್ರ, ಕೇರಳದಲ್ಲೂ ಆರಂಭವಾಗಿದೆ. ಪತಂಜಲಿ ಸಂಸ್ಥೆಯಡಿ ರಾಜ್ಯದಲ್ಲಿರುವ ಸದಸ್ಯರಿಗಾಗಿ ನಿಗಮದ ಕರ್ನಾಟಕದ ವೃತ್ತದಿಂದ ‘ಪತಂಜಲಿ ಬಿಎಸ್‌ಎನ್‌ಎಲ್ ಪ್ಲಾನ್’ ರೂಪಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾದ್ರಿ ಹೇಳಿದರು.

ಪತಂಜಲಿ ಸಮೂಹದಡಿ ರಾಜ್ಯದಲ್ಲಿ 27 ಸಾವಿರಕ್ಕೂ ಹೆಚ್ಚು ಮಳಿಗೆ, ಕೇಂದ್ರಗಳಿವೆ ಎಂಬ ಮಾಹಿತಿ ಇದೆ. ಸದಸ್ಯತ್ವ ಗುರುತಿನ ಚೀಟಿ ಆಧರಿಸಿ ಒಬ್ಬರಿಗೆ ಒಂದು ಸಿಮ್ ನೀಡಲಾಗುತ್ತದೆ. ಅಪರಿಮಿತ ಉಚಿತ ಕರೆ, ದೇಶಾದ್ಯಂತ ಉಚಿತ ರೋಮಿಂಗ್ ಸೌಲಭ್ಯ, ನಿತ್ಯ 2 ಜಿಬಿ ಡೇಟಾ, ನಿತ್ಯ 100 ಉಚಿತ ಎಸ್‌ಎಂಎಸ್ ಹಾಗೂ ಉಚಿತ ಪತಂಜಲಿ ಪಿಆರ್‌ಬಿಟಿ ಸೌಲಭ್ಯವಿರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅತಿ ಮಿತವ್ಯಯದ ಪ್ಲಾನ್ ಇದಾಗಿದೆ ಎಂದು ಹೇಳಿದರು.

ಬಿಎಸ್‌ಎನ್‌ಎಲ್ ಬೆಂಗಳೂರು ಟೆಲಿಕಾಂ ಜಿಲ್ಲೆಯ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಜನಾರ್ಧನ ರಾವ್, ಪ್ರಧಾನ ವ್ಯವಸ್ಥಾಪಕ (ಮಾರಾಟ ಮತ್ತು ಮಾರ್ಕೆಟಿಂಗ್) ಸುರೇಂದ್ರನ್, ಕರ್ನಾಟಕ ವೃತ್ತದ ಪ್ರಧಾನ ವ್ಯವಸ್ಥಾಪಕ (ಮಾರಾಟ ಮತ್ತು ಮಾರ್ಕೆಟಿಂಗ್) ವಿವೇಕ್ ಜೈಸ್ವಾಲ್, ಪ್ರಧಾನ ವ್ಯವಸ್ಥಾಪಕ (ಮೊಬೈಲ್ ಸರ್ವಿಸ್) ಬಿ.ವೆಂಕಟೇಶ್ವರಲು, ಭಾರತ್ ಸ್ವಾಭಿಮಾನ್ ನ್ಯಾಸ್ ಕರ್ನಾಟಕ ಮುಖ್ಯಸ್ಥ ಶಾಂತಿಲಾಲ್ ಜೈನ್, ಪ್ರಮುಖರಾದ ಜೈದೀಪ್ ಆರ್ಯ, ಮಂಜುನಾಥ್ ಇತರರು ಉಪಸ್ಥಿತರಿದ್ದರು.

ಪ್ಲಾನ್ ಬಗೆಗಿನ ವಿವರ: 144 ರೂ. - 30 ದಿನ, 792 ರೂ.- 180  ದಿನ, 1584 ರೂ.- 365 ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News