ಬೆಂಗಳೂರು: ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2018-07-22 15:04 GMT

ಬೆಂಗಳೂರು, ಜು.22: ಅವಳಿ ಹೆಣ್ಣುಮ್ಕಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿದ್ದ ತಂದೆಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಹೈಕೊರ್ಟ್ ಮಹತ್ವದ ತೀರ್ಪು ನೀಡಿದೆ.

ತನ್ನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೊಪಿಸಿ ಪತಿ ವಿರುದ್ಧ ಪತ್ನಿಯೇ ದೂರು ನೀಡಿದ್ದಳು. ನಂತರ ರಾಜಿ ಒಪ್ಪಂದದ ಅನುಸಾರ 2018ರಲ್ಲಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದಂಪತಿ, ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ಸಾಮಾನ್ಯವಾಗಿ ಅತ್ಯಾಚಾರ ಹಾಗೂ ಪೊಸ್ಕೊ ಪ್ರಕರಣಗಳಲ್ಲಿ ರಾಜಿಗೆ ಅವಕಾಶವಿಲ್ಲವಾದರೂ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ನಗರದ ಮಹಿಳೆಯೊಬ್ಬರು ತಮ್ಮ ಐದೂವರೆ ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ಪತಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿ 2014ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ವ್ಯಕ್ತಿಯ ವಿರುದ್ಧ ಅತ್ಯಾಚಾರ ಹಾಗೂ ಪೊಸ್ಕೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿದ್ದ ಪೊಲೀಸರು, ಅಧೀನ ನ್ಯಾಯಾಲಯಕ್ಕೆ ದೋಷಾರೊಪ ಪಟ್ಟಿ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ದಂಪತಿ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ರಾಜಿಗೆ ನಿರ್ಧರಿಸಿದರು.

ಮಕ್ಕಳ ಭವಿಷ್ಯವೇ ಮುಖ್ಯ: ಮಾನಸಿಕ ತಜ್ಞರು ಅಥವಾ ತಪಾಸಣೆ ನಡೆಸಿದ ವೈದ್ಯರ ಮುಂದಾಗಲಿ ತಂದೆ ಕೃತ್ಯವೆಸಗಿರುವ ಬಗ್ಗೆ ಮಕ್ಕಳು ಯಾವ ಮಾಹಿತಿಯನ್ನೂ ನೀಡಿಲ್ಲ. ವೈದ್ಯರ ವರದಿಯಲ್ಲೂ ಮಕ್ಕಳ ಸ್ವಭಾವ ಸಹಜವಾಗಿದೆ ಎಂದೇ ವಿವರಿಸಲಾಗಿದೆ. ದಂಪತಿ ನಡುವಿನ ವೈಮನಸ್ಸಿನಿಂದಲೊ ಅಥವಾ ತಾಯಿಯ ತಪ್ಪು ಗ್ರಹಿಕೆಯಿಂದಲೊ ಆರೋಪಿ ವಿರುದ್ಧ ದೂರು ದಾಖಲಾಗಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಹೈಕೊರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂಥ ಅನುಮಾನಾಸ್ಪದ ಸಂದರ್ಭದಲ್ಲಿ ಆರೋಪಿ ಹಾಗೂ ದೂರುದಾರರು ರಾಜಿಯಾದಲ್ಲಿ, ಅದನ್ನು ಕೋರ್ಟ್ ಪರಿಶೀಲಿಸಬೇಕಾಗುತ್ತದೆ. ಅಂತಿಮವಾಗಿ, ಅಪ್ರಾಪ್ತ ಮಕ್ಕಳ ಭವಿಷ್ಯವೇ ಮುಖ್ಯವಾಗಿದ್ದು, ದಂಪತಿಯ ರಾಜಿಯನ್ನೂ ಒಪ್ಪಬಹುದಾಗಿದೆ ಎಂದು ಹೈಕೊರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ರಾಚಯ್ಯ ಅವರೂ ಸಹಮತ ಸೂಚಿಸಿದ್ದರಿಂದ ಹೈಕೋರ್ಟ್ ಪ್ರಕರಣ ರದ್ದುಪಡಿಸಿದೆ.

ಕೋರ್ಟ್‌ನಲ್ಲೆ ಡಿಡಿ ನೀಡಿದ ಪತಿ: ರಾಜಿ ಒಪ್ಪಂದದಂತೆ ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ 20 ಲಕ್ಷ, ಮಡದಿಯ ಹೆಸರಿಗೆ 20 ಲಕ್ಷ ಸೇರಿ ಒಟ್ಟು 60 ಲಕ್ಷ ನೀಡುವುದಾಗಿ ತಿಳಿಸಿದ್ದ ಪತಿ, ನ್ಯಾಯಮೂರ್ತಿಗಳ ಸಮ್ಮುಖದಲ್ಲೆ ಪತ್ನಿಗೆ 3 ಡಿಡಿಗಳನ್ನು ನೀಡಿದ್ದಾರೆ. ಅಲ್ಲದೆ, ಮಡದಿ-ಮಕ್ಕಳ ವಾಸಕ್ಕಾಗಿ ಕೆ.ಆರ್. ಪುರದಲ್ಲಿ ಫ್ಲ್ಯಾಟ್ ನೀಡುವುದಾಗಿ ತಿಳಿಸಿದ್ದ ಪತಿ, ಮನೆಯ ಕೀಗಳನ್ನೂ ಹೆಂಡತಿಗೆ ಹಸ್ತಾಂತರಿಸಿದ್ದರು.

ಮಕ್ಕಳ ಭವಿಷ್ಯವೇ ಮುಖ್ಯವೆನಿಸಿದಾಗ ತನ್ನ ಪರಮಾಧಿಕಾರ ಬಳಸಿ ತೀರ್ಪು ನೀಡಲು ನ್ಯಾಯಾಲಯಕ್ಕೆ ಅಧಿಕಾರವಿದೆ. ವೈದ್ಯಕೀಯ ವರದಿಗಳಲ್ಲೂ ಆರೋಪಗಳು ಸಾಬೀತಾಗದ್ದರಿಂದ ಸಂದೇಹದ ಸಂಪೂರ್ಣ ಲಾಭ ಆರೋಪಿಗೆ ನೀಡಬಹುದಾಗಿದೆ. ಜತೆಗೆ ಆರೋಪಿ, ದೂರುದಾರೆ ಹಾಗೂ ಸಂತ್ರಸ್ತರು ಒಂದೇ ಕುಟುಂಬಕ್ಕೆ ಸೇರಿದವರಾದ್ದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ನ್ಯಾಯಾಲಯ ಪ್ರಕರಣ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News