ಉಚಿತ ಬಸ್‌ಪಾಸ್ ಬಗ್ಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ವಿಷಾದಕರ: ಎಐಎಸ್‌ಡಿಓ

Update: 2018-07-22 15:13 GMT

ಬೆಂಗಳೂರು, ಜು.22: ವಿದ್ಯಾರ್ಥಿಗಳು ಹಾಗೂ ಪೋಷಕರ ನಿರಂತರವಾದ ಪ್ರತಿಭಟನೆ, ಬಂದ್‌ಗೆ ಸ್ಪಂದಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಚಿತ ಬಸ್‌ಪಾಸ್ ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಅವರು ಎಲ್ಲರಿಗೂ ಪಾಸ್ ನೀಡಲು ಸಾಧ್ಯವಿಲ್ಲ ಎಂದು ತಳ್ಳಿ ಹಾಕಿರುವುದು ವಿಷಾದಕರ ಎಂದು ಎಐಎಸ್‌ಡಿಓ ಆಕ್ರೋಶ ವ್ಯಕ್ತಪಡಿಸಿದೆ.

4 ವರ್ಷಗಳಿಂದ ಸತತ ಬರ, ಬೆಲೆ ಏರಿಕೆ, ನೋಟು ರದ್ಧತಿ ಸೇರಿದಂತೆ ಹಲವಾರು ಕಾರಣಗಳಿಂದ ಗ್ರಾಮೀಣ ಹಾಗೂ ಬಡ ಜನತೆ ಬಳಲಿ ಬೆಂಡಾಗಿದ್ದಾರೆ. ದೊಡ್ಡ ಸಂಖ್ಯೆಯ ಬಡ ವಿದ್ಯಾರ್ಥಿಗಳು ಬಸ್‌ಪಾಸ್‌ಗೆ ಹಣ ಹೊಂದಿಸಲಾರದೆ, ಶಿಕ್ಷಣವನ್ನೇ ತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಜಾರಿಯಾಗಿದ್ದರೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಉಚಿತ ಬಸ್‌ಪಾಸ್ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತ ತಂದಿದೆ. ಈ ಹಿನ್ನಲೆಯಲ್ಲಿ, ಹಿಂದಿನ ಸರಕಾರದ ಎಲ್ಲ ಘೋಷಣೆಗಳನ್ನು ಮುಂದುವರೆಸುವುದಾಗಿ ಬಜೆಟ್ ಅಧಿವೇಶನದಲ್ಲಿ ಮಂಡಿಸಿದ್ದ ಮುಖ್ಯಮಂತ್ರಿಗಳು, ತಮ್ಮ ನಿಲುವನ್ನು ಬದಲಿಸಿಕೊಂಡು ವಿದ್ಯಾರ್ಥಿಗಳ ಬವಣೆಗೆ ಹಾಗೂ ಹೋರಾಟಕ್ಕೆ ಬೆಲೆ ಕೊಟ್ಟು, ಉಚಿತ ಬಸ್‌ಪಾಸ್ ನೀಡಬೇಕು ಎಂದು ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News