ಪ್ರಧಾನಿ ಮೋದಿಗೆ ಸೋಲಿನ ರುಚಿ ತೋರಿಸಬೇಕಾಗಿದೆ: ಡಾ.ಇಲ್ಯಾಸ್

Update: 2018-07-22 15:22 GMT

ಬೆಂಗಳೂರು, ಜು. 22: ದೇಶದೆಲ್ಲೆಡೆ ಜಾತ್ಯತೀತ ಪಕ್ಷಗಳು ಒಗ್ಗೂಡಿ ಜಾತ್ಯತೀತ ಮತ ವಿಭಜನೆ ತಪ್ಪಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸೋಲಿನ ರುಚಿ ತೋರಿಸಬೇಕಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ಇಂದಿಲ್ಲಿ ತಿಳಿಸಿದ್ದಾರೆ.

ನಗರದ ಬೆಸನ್‌ಟೌನ್‌ನ ಇಂಡಿಯನ್ ಸೈನ್ಸ್ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ದೇಶ ವಿಭಜಿಸಿ ಕೋಮುವಾದ ಆಡಳಿತ ನಡೆಸುವ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ಎಲ್ಲ ಜಾತ್ಯತೀತ ಪಕ್ಷಗಳೂ ಒಗ್ಗೂಡಬೇಕಾಗಿದೆ. ಒಂದು ವೇಳೆ ಜಾತ್ಯತೀತರ ಮತಗಳು ವಿಭಜನೆಯಾದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಕೇಂದ್ರ ಸರಕಾರ ಕೋಮು ಹಾಗೂ ಯೋಜಿತ ಹಿಂಸಾಚಾರ ತಡೆ ವಿಧೇಯಕ ಜಾರಿಗೆ ತರಬೇಕು. ಇದರ ಬಗ್ಗೆ ಸಂಸತ್ತಿನಲ್ಲಿ ಇನ್ನೂ ಚರ್ಚೆಯಾಗಬೇಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷಗಳು ಈ ವಿಧೇಯಕ ವಿರುದ್ಧ ದೊಡ್ಡ ಕೂಗು ಎಬ್ಬಿಸಿ, ವಿಧೇಯಕ ಜಾರಿಯಾದರೆ ದೇಶ ಇಬ್ಭಾಗವಾಗುತ್ತದೆ. ಇದೊಂದು ಕ್ರೂರ ವಿಧೇಯಕ ಎನ್ನುವಂತೆ ಗುಲ್ಲೆಬ್ಬಿಸಿರುವುದು ಖಂಡನೀಯ ಎಂದು ನುಡಿದರು.

ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ಈ ಪಕ್ಷವೂ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ ಎಂದ ಅವರು, ಕೇಂದ್ರದ ಮೋದಿ ಸರಕಾರ ಎಲ್ಲ ರಂಗದಲ್ಲಿ ವಿಫಲಗೊಂಡಿದೆ. ಹೀಗಾಗಿ, ಜನರು ಭ್ರಮ ನಿರಸನಗೊಂಡಿದ್ದಾರೆ. ಇನ್ನು, ಇಂಧನ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಿ, ಜನಸಾಮಾನ್ಯರಿಗೆ ಹೊರೆ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಕೃಷಿ ಕ್ಷೇತ್ರದಲ್ಲಿ ಸಾಧನೆ ಶೂನ್ಯವಾಗಿದೆ. ದೇಶದಲ್ಲಿ ಅಭಿವೃದ್ಧಿ ದರ ಶೂನ್ಯಕ್ಕಿಂತ ಕೆಳಗಿದೆ. ಅಷ್ಟೇ ಅಲ್ಲದೆ, ದೇಶದ ಶೇ.70 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳ ಜನತೆಗಾಗಿ ಮೋದಿ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸಿಲ್ಲ ಎಂದು ಕಿಡಿಕಾರಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಉದ್ಯೋಗ ಸೃಷ್ಟಿಸುವಲ್ಲಿ ಸರಕಾರ ವಿಫಲವಾಗಿದ್ದು, ಶೀಘ್ರದಲ್ಲಿಯೇ ರಾಷ್ಟ್ರಮಟ್ಟದಲ್ಲೇ ಮೋದಿ ಆಡಳಿತ ವಿರುದ್ಧ ಬೃಹತ್ ಆಂದೋಲನ ನಡೆಸುವುದಾಗಿ ಇಲ್ಯಾಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News