ಮಕ್ಕಳನ್ನು ಕೇವಲ ಪಠ್ಯಗಳಿಗೆ ಸೀಮಿತಗೊಳಿಸುವ ಪ್ರಯತ್ನ ಅಪಾಯಕಾರಿ: ಕವಿ ದುಂಡಿರಾಜ್

Update: 2018-07-22 15:27 GMT

ಬೆಂಗಳೂರು, ಜು. 22: ಪೋಷಕರು ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಎಂಬ ದೃಷ್ಟಿಯಿಂದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಹಾಸ್ಯ ಕವಿ ದುಂಡಿರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅನುಪಮಾ ಮಂಗಳವೇಧಿ ಅವರ ಅನುಪಮ ಕಥನ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಸಾಂಸ್ಕೃತಿಕವಾಗಿ ಬೆಳೆಯಲು ಅಪಾರವಾದ ಪ್ರೋತ್ಸಾಹ ನೀಡುತ್ತಿದ್ದರು. ನಾಟಕ, ನೃತ್ಯ, ಹಾಡು, ಕುಣಿತ ಎಲ್ಲದಕ್ಕೂ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು. 

ಹಿಂದಿನ ದಿನಗಳಲ್ಲಿ ಪೋಷಕರು ನಮ್ಮ ಮಕ್ಕಳು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅಥವಾ ಸರ್.ಎಂ.ವಿಶ್ವೇಶ್ವರಯ್ಯ ರೀತಿಯಲ್ಲಿ ಬೆಳೆಯಬೇಕು ಎಂದು ಆಶಿಸುತ್ತಿದ್ದರು. ಆದರೆ, ಇಂದಿನ ಪೋಷಕರು ನಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಎನ್ನುತ್ತಿದ್ದಾರೆ. ಕೇವಲ ಪಠ್ಯಗಳಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ದುಂಡಿರಾಜ್ ತಿಳಿಸಿದರು.

ಅಮೆರಿಕಾ ಸೇರಿದಂತೆ ಹೊರ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೆ ಮಾತೃಭಾಷೆ ಬಗ್ಗೆ ಅಪಾರವಾದ ಪ್ರೀತಿಯಿರುತ್ತದೆ. ಕರ್ನಾಟಕದಲ್ಲಿ ಮೂರು-ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಿಂತ, ಹೊರ ದೇಶದಲ್ಲಿ ಒಂದು ಕನ್ನಡದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅತ್ಯಂತ ಹೆಚ್ಚು ಆನಂದ, ಸಂತೋಷವನ್ನು ಪಡುತ್ತಾರೆ. ಆ ನಿಟ್ಟಿನಲ್ಲಿ ಅನುಪಮಾ ಅವರದ್ದು, ಧಾರಾಳವಾದ ಪ್ರೀತಿಯುಳ್ಳ ಸಂಬಂಧವಾಗಿದೆ. ಆಧುನೀಕರಣ ವಿನ್ಯಾಸದ ಮೂಲಕ ಅತ್ಯುತ್ತಮವಾಗಿ ಪುಸ್ತಕ ಮೂಡಿಬಂದಿದ್ದು, ಅನುಪಮಾ ಅವರ ಜೀವನದ ಚಿತ್ರಣವನ್ನು ಬಿಚ್ಚಿಡಲಾಗಿದೆ ಎಂದು ಅವರು ನುಡಿದರು.

ನೃತ್ಯ ವಿದೂಶಕಿ ಡಾ.ಬಿ.ಎನ್.ಮನೋರಮಾ ಮಾತನಾಡಿ, ಮೂಲತಃ ಲೇಖಕಿಯಲ್ಲದಿದ್ದರೂ, ಅದ್ಭುತವಾದ ಲೇಖನಗಳನ್ನು ಅನುಪಮಾ ಬರೆದಿದ್ದಾರೆ. ಧ್ಯಾನವಿಟ್ಟು ಓದಿದರೆ, ಮನುಷ್ಯನ ಮನೋಬಲ ಮತ್ತು ಸಂಕಲ್ಪ ಶಕ್ತಿಗಳ ಸರಳ ನಿರೂಪಣೆ ಕೃತಿಯಲ್ಲಿದೆ. ಶ್ರದ್ಧೆ, ಪರಿಶ್ರಮಗಳಿದ್ದರೆ ಯಾರು ಬೇಕಾದರೂ ಸಾಧಿಸಬಹುದು ಎಂಬ ಸಂದೇಶವನ್ನು ನೀಡಿದ್ದಾರೆ. ಪ್ರಾಮಾಣಿಕತೆಯ ಬಗ್ಗೆಯೂ ಕೃತಿಯಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.

ಅನುಪಮಾಳ ಮನಸ್ಸು ಅಸಾಧ್ಯವನ್ನು ಸಾಧ್ಯವಾಗಿಸುವುದರ ಬಗ್ಗೆ ಚಿಂತಿಸುತ್ತದೆ. ತನ್ನನ್ನು ತಾನು ನಂಬಬೇಕು ಎಂದು ದೃಢೀಕರಿಸುವ ವಿಷಯಗಳನ್ನು ಕೃತಿಯಲ್ಲಿದೆ. ಅಲ್ಲದೆ, ಮನುಷ್ಯನ ಪ್ರೀತಿ, ಸಂಬಂಧಗಳನ್ನು ಹಾಗೂ ವಿಶ್ವಾಸವನ್ನು ಅನುಪಮಾಳ ಮನಸ್ಥಿತಿ ಯಾವ ರೀತಿಯಲ್ಲಿ ಅರ್ಥೈಸಿಕೊಂಡಿದೆ ಎಂಬುದನ್ನು ಪುಸ್ತಕ ಪರಿಚಯಿಸುತ್ತದೆ ಎಂದು ಅವರು ತಿಳಿಸಿದರು.

ಇಂದಿನ ದಿನಗಳಲ್ಲಿ ಶ್ರೀಮಂತರು ಮಾಡುವ ಸಾಧನೆಗಳು ಮಾತ್ರ ಹೊರಗಿನ ಸಮಾಜಕ್ಕೆ ತಿಳಿಯುತ್ತಿದೆ. ಆದರೆ, ತಳಮಟ್ಟದ, ಮಧ್ಯಮ ವರ್ಗದವರು ಮಾಡುವ ಸಾಧನೆಗಳು ಯಾರೂ ಗುರುತಿಸುತ್ತಿಲ್ಲ ಎಂದ ಅವರು, ವೃತ್ತಿ ಕಲಾವಿದೆಯಾಗಿ ಅಲ್ಲದಿದ್ದರೂ ತಮ್ಮ ಬದುಕಿನ ಪ್ರತಿಯೊಂದು ಸಂಗತಿಯನ್ನು ಅನುಭವಿಸಿ ಸಂಕೋಚವಿಲ್ಲದೆ ಕೃತಿಯಲ್ಲಿ ನಿರೂಪಿಸಿದ್ದಾರೆ. ಅದರಲ್ಲಿ ಯಾರನ್ನೂ ನಿಂದಿಸುವ ಅಥವಾ ಅವಹೇಳನ ಮಾಡುವ ವಿಚಾರಗಳಿಲ್ಲ ಎಂದು ಮನೋರಮಾ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್, ಲೇಖಕಿ ಅನುಪಮಾ ಹಾಗೂ ಶ್ರೀವತ್ಸ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News