ನ್ಯಾಯದಾನದಲ್ಲಿನ ವಿಳಂಬಕ್ಕೆ ಜನಸಂಖ್ಯೆಯೇ ಮುಖ್ಯ ಕಾರಣ: ನಿವೃತ್ತ ನ್ಯಾ. ಶಿವರಾಜ್ ಪಾಟೀಲ್

Update: 2018-07-22 15:38 GMT

ಬೆಂಗಳೂರು, ಜು.22: ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೇ ಮುಖ್ಯ ಕಾರಣ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹೇಳಿದ್ದಾರೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಪ್ರಾರಂಭಿಸಿರುವ ಆರ್‌ಎನ್‌ಬಿ ಆರ್ಬಿಟ್ರೇಷನ್ ಮತ್ತು ಮಧ್ಯಸ್ಥಿಕೆ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು, ಪ್ರಕರಣಗಳ ವಿಲೇವಾರಿಗೆ ವಕೀಲರು ಮತ್ತು ಕಕ್ಷಿದಾರರು ವರ್ಷಗಟ್ಟಲೆ ಕಾಯುತ್ತಿರುವ ಪರಿಣಾಮ ದೇಶಕ್ಕೆ ವಾರ್ಷಿಕ 1.50 ಕೋಟಿ ನಷ್ಟವಾಗುತ್ತಿದೆ ಎಂದರು.

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 3.3 ಕೋಟಿ ಪ್ರಕರಣ ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ ಶೇ. 75ರಷ್ಟು ಕ್ರಿಮಿನಲ್ ಮತ್ತು ಶೇ. 25ರಷ್ಟು ಸಿವಿಲ್ ವ್ಯಾಜ್ಯಗಳಿವೆ. ಈ ಹೊರೆ ಇಳಿಸಲು ಪರ್ಯಾಯ ವ್ಯಾಜ್ಯ ಇತ್ಯರ್ಥ ವಿಧಾನಗಳಿಗೆ ಆರ್‌ಎನ್‌ಬಿ ಆರ್ಬಿಟ್ರೇಷನ್ ಮತ್ತು ಮಧ್ಯಸ್ಥಿಕೆ ಕೇಂದ್ರವು ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಆನಂದ ಬೈರಾರೆಡ್ಡಿ ಮಾತನಾಡಿ, ಆರ್‌ಎನ್‌ಬಿ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಆನ್‌ಲೈನ್ ಮೀಡಿಯೇಷನ್, ಕಮ್ಯುನಿಟಿ ಮೀಡಿಯೇಷನ್ ಪರಿಚಯಿಸಲಾಗುವುದು. ಪರ್ಯಾಯ ವ್ಯಾಜ್ಯ ಇತ್ಯರ್ಥ ವಿಧಾನಗಳ ಬಗ್ಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ರಾಜೇಂದ್ರ ಬಾಬು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಮತ್ತು ವಿ.ಗೋಪಾಲಗೌಡ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಅಜಿತ್ ಗುಂಜಾಳ ಹಾಗೂ ಬಿ.ಎಸ್.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News