ಆಧುನಿಕ ಸವಾಲುಗಳಿಗೆ ಹೊಂದಿಕೊಳ್ಳುವ ಜ್ಞಾನ ಅಗತ್ಯ: ಡಾ.ಮಂಜುಸಿಂಗ್

Update: 2018-07-22 16:41 GMT

ಬೆಂಗಳೂರು, ಜು.22: ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಹಾಗೂ ಸವಾಲುಗಳಿಗೆ ಹೊಂದಿಕೊಳ್ಳಲು ನಮ್ಮ ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ಜಂಟಿ ಕಾರ್ಯದರ್ಶಿ ಡಾ. ಮಂಜುಸಿಂಗ್ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಯಲಹಂಕ ಬಳಿಯ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿಶ್ವ ವಿದ್ಯಾಲಯದ 8ನೆ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮಲ್ಲಿನ ಜ್ಞಾನವನ್ನು ಹೆಚ್ಚಿಕೊಂಡಾಗ ಮಾತ್ರ ಹೆಚ್ಚು ಆವಿಷ್ಕಾರಗಳನ್ನು ಮಾಡಲು ಸಾಧ್ಯವಾಗುತ್ತದೆ. ಆ ಮೂಲಕ ಭಾರತವು ಜಗತ್ತಿನ ಭೂಪಟದಲ್ಲಿ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಿಜಿಟಲ್ ತಂತ್ರಜ್ಞಾನ ನಮ್ಮ ಬದುಕುನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾಧ್ಯಾಪಕರನ್ನು ಆಧುನಿಕ ತಂತ್ರಜ್ಞಾನದ ಬಳಕೆಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡುವ ರೀತಿಯಲ್ಲಿ ಸಜ್ಜುಗೊಳಿಸಬೇಕು. ಆಗ ಮಾತ್ರ ದೇಶದ ತಂತ್ರಜ್ಞಾನ ಉನ್ನತೀಕರಣಗೊಳ್ಳುತ್ತದೆ ಎಂದು ತಿಳಿಸಿದರು.

ಹೊಸ ಆಯಾಮಗಳನ್ನು ಪಡೆದುಕೊಂಡ ನಾಲ್ಕು ಹಂತಗಳಲ್ಲಿ ಕೈಗಾರಿಕಾ ಕ್ರಾಂತಿಗಳು ಮನುಷ್ಯನ ಬದುಕನ್ನು ನಿಜವಾದ ರೀತಿಯಲ್ಲಿ ಉನ್ನತೀಕರಿಸಿವೆ. ಕ್ರಿ.ಶ.1800 ರಲ್ಲಿ ಮೊದಲು ನೀರು ಮತ್ತು ಆವಿ ಬಳಸಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ನಂತರದಲ್ಲಿ ವಿದ್ಯುತ್ ಶಕ್ತಿ ಮಹತ್ವವಾದ ಪಾತ್ರ ವಹಿಸಿದೆ. ಮೂರನೆಯ ಪ್ರಮುಖ ಹಂತಗಳಲ್ಲಿ ಎಲೆಕ್ಟ್ರಾನಿಕ್ಸ್ ಅಂದರೆ ವಿದ್ಯುನ್ಮಾನ ನಮ್ಮ ಅನ್ವೇಷಣೆಯ ದಿಕ್ಕನ್ನು ಬದಲಿಸಿತು. ಆದರೆ, ಇಂದು ಎಲ್ಲವೂ ಹಿಡಿತದಲ್ಲಿವೆ. ನವನನೀವ ಸಂಶೋಧನೆಗಳ ಬಗ್ಗೆ ಸ್ಪೂರ್ತಿ ನೀಡಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೋ.ಎನ್.ಆರ್.ಶೆಟ್ಟಿ ಮಾತನಾಡಿ, ನೂತನವಾಗಿ ಪದವೀಧರರಾಗುವವರು ಎಲ್ಲಿಯಾದರೂ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರೂ ತಮ್ಮ ಅನ್ವೇಷಣಾ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ಅದರ ಜೊತೆಗೆ, ಪರಿಸರಕ್ಕೆ ತೊಂದರೆಯಾಗದಂತೆ ಹೊಸ ಅನ್ವೇಷಣೆ, ಆವಿಷ್ಕಾರಗಳನ್ನು ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿದ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ಕಿಶನ್ ಕುಮಾರ್ ಗುಪ್ತಾ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಸ್ವೀಕರಿಸಿದರು. ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಇನ್‌ಫರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಎಂ.ಆರ್.ನಿಹಾರಿಕಾ ಪಡೆದರು. ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರಿಸಿದ್ದ ಕೆ.ಎಸ್.ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಜೆಫಿ ಸ್ಯಾಮ್ ಜೋಸೆಫ್‌ಗೆ ನೀಡಲಾಯಿತು.

ಎಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದ ಕಿಶನ್ ಕುಮಾರ್ ಗುಪ್ತಾ, ದೇಶ್ನಾ ಕುಂಡು, ಎ.ನಿತ್ಯಾ, ಎಂ.ಪಿ.ಕುಮುದಾಶ್ರೀ, ಎಸ್.ಸೌಂದರ್ಯ, ಎಂ.ಯೋರ್ಹಾನ ಮೊಬಿನ್, ಕೆ.ಎಂ.ಶ್ರೀಕಾಂತ್ ಅವರಿಗೆ ಪದಕ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ದತ್ತಿ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜಾ ಸೆೀರಿದಂತೆ ಹಲವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News