ಹರಿಣ ಪಡೆಗೆ ಸೋಲಿನ ಭೀತಿ

Update: 2018-07-22 18:40 GMT

ಕೊಲಂಬೊ, ಜು.22: ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ ನಲ್ಲಿ ದಕ್ಷಿಣ ಆಫ್ರಿಕ ತಂಡ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕೈ ಚೆಲ್ಲಿದ್ದು, ಗೆಲುವಿಗೆ ಇನ್ನೂ 351 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಸಿಂಹಳೀಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೂರನೇ ದಿನವಾದ ರವಿವಾರ ಆಟ ನಿಂತಾಗ ದಕ್ಷಿಣ ಆಫ್ರಿಕ 2ನೇ ಇನಿಂಗ್ಸ್‌ನಲ್ಲಿ 41 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 139 ರನ್ ಗಳಿಸಿತ್ತು.

45 ರನ್ ಗಳಿಸಿರುವ ಥೆವುನಿಸ್ ಡಿ ಬ್ರೂನ್ ಮತ್ತು ಇನ್ನೂ ಖಾತೆ ತೆರೆಯದ ತಾಂಬೆ ಬಹುಮಾ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಎರಡನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿದ್ದ ಶ್ರೀಲಂಕಾ ತಂಡ ರವಿವಾರ ಆಟ ಮುಂದುವರಿಸಿ 81 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 275 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಶನಿವಾರ ದಿಮುತ್ ಕರುಣರತ್ನೆ ಔಟಾಗದೆ 59 ರನ್ ಮತ್ತು ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 12 ರನ್ ಗಳಿಸಿದ್ದರು.

ಇಂದು ಬ್ಯಾಟಿಂಗ್ ಮುಂದುವರಿಸಿದ ಕರುಣರತ್ನೆ ಮತ್ತು ಮ್ಯಾಥ್ಯೂಸ್ 4ನೇ ವಿಕೆಟ್‌ಗೆೆ 63 ರನ್ ಸೇರಿಸಿದರು. 48.1ನೇ ಓವರ್‌ನಲ್ಲಿ ಕರುಣರತ್ನೆ ಲುಂಗಿ ಗಿಡಿ ಎಸೆತದಲ್ಲಿ ಡಿ ಕಾಕ್‌ಗೆ ವಿಕೆಟ್ ಒಪ್ಪಿಸಿದರು. 85 ರನ್ ಗಳಿಸಿ ಅವರು ನಿರ್ಗಮಿಸಿದರು.

ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ರೋಶನ್ ಸಿಲ್ವ 5ನೇ ವಿಕೆಟ್‌ಗೆ 64 ರನ್ ಸೇರಿಸಿದರು.ಮ್ಯಾಥ್ಯೂಸ್ 71 ರನ್ ಗಳಿಸಿ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾದ ಸ್ಕೋರ್ 81 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 275ಕ್ಕೆ ತಲುಪುವಾಗ ನಾಯಕ ಸುರಂಗ ಲಕ್ಮಲ್ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಕೇಶವ್ ಮಹಾರಾಜ್ 154ಕ್ಕೆ 3 ವಿಕೆಟ್ ಪಡೆದಿದ್ದಾರೆ.

ಗೆಲುವಿಗೆ 490 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಎರಡನೇ ಇನಿಂಗ್ಸ್ ನಲ್ಲಿ 41 ಓವರ್‌ಗಳಲ್ಲಿ 139 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಡೀನ್ ಎಲ್ಗರ್ (37 ) , ಏಡೆನ್ ಮಕ್ರಮ್(14), ಹಾಶಿಮ್ ಅಮ್ಲ (6), ಎಫ್‌ಡು ಪ್ಲೆಸಿಸ್ (7) ಔಟಾಗುವುದರೊಂದಿಗೆ ದಕ್ಷಿಣ ಆಫ್ರಿಕ ಸೋಲಿನ ಭೀತಿ ಎದುರಿಸುವಂತಾಗಿದೆ. ರಂಗನ ಹೆರಾತ್ 54ಕ್ಕೆ 2, ಅಖಿಲ ಧನಂಜಯ 35ಕ್ಕೆ 2 ಮತ್ತು ದಿಲ್ರುವಾನ್ ಪೆರೆರಾ 38ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News