ಜರ್ಮನಿಯ ಫುಟ್ಬಾಲ್ ಆಟಗಾರ ಮಸೂದ್ ಒಝಿಲ್ ಫುಟ್ಬಾಲ್ ಗೆ ವಿದಾಯ

Update: 2018-07-23 12:05 GMT

 ಬರ್ಲಿನ್ , ಜು.23: ಜನಾಂಗೀಯ ನಿಂದನೆ ವಿರೋಧಿಸಿ ಜರ್ಮನಿಯ ಮಿಡ್ ಫೀಲ್ಡರ್  ಮಸೂದ್ ಒಝಿಲ್ ಅವರು ಅಂತರ್ ರಾಷ್ಟ್ರೀಯ ಫುಟ್ಬಾಲ್ ನಿಂದ ರವಿವಾರ ನಿವೃತ್ತಿ ಘೋಷಿಸಿದ್ದಾರೆ .

29ರ ಹರೆಯದ  ಒಝಿಲ್  ರಶ್ಯಾದಲ್ಲಿ ನಡೆದ ಫಿಫಾ ವಿಶ್ವ ಕಪ್ ನಲ್ಲಿ ಜರ್ಮನಿ ತಂಡದಲ್ಲಿ ಆಡಿದ್ದರು.  ಅವರ ಪ್ರದರ್ಶನ  ಟೀಕೆಗೆ ಗುರಿಯಾಗಿತ್ತು . ಜರ್ಮನಿ ವಿಶ್ವಕಪ್ ನಲ್ಲಿ ಸೋತು ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ವಿಶ್ವಕಪ್ ನಲ್ಲಿ ಓಝಿಲ್ ಕಳಪೆ ಪ್ರದರ್ಶನ ನೀಡಿದ್ದರು. ಇದು ಟೀಕೆಗೆ ಗುರಿಯಾಗಿತ್ತು.

ಒಝಿಲ್ ಕಳೆದ ಮೇನಲ್ಲಿ ಟರ್ಕಿಯ ಅಧ್ಯಕ್ಷ  ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರನ್ನು ಭೇಟಿಯಾಗಿದ್ದರು ಇದು ವಿವಾದವನ್ನುಂಟು ಮಾಡಿತ್ತು. ಟರ್ಕಿ ಮೂಲದ ಓಝಿಲ್ ಅವರು ತಾನು ಟರ್ಕಿ ಅಧ್ಯಕ್ಷರನ್ನು ಭೇಟಿಯಾದ ಬಳಿಕ ಮೊದಲ ಬಾರಿ ನೀಡಿದ ಹೇಳಿಕೆಯಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

“ನನ್ನ ಕುಟುಂಬವಿರುವ ದೇಶದ ಅಧ್ಯಕ್ಷರನ್ನು ಭೇಟಿಯಾಗಿರುವುದು ಗೌರವದ ವಿಚಾರವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ರಾಜಕಾರಣಿ ಅಲ್ಲ. ಫುಟ್ಬಾಲ್ ಆಟಗಾರ. ನನ್ನ ಕೆಲಸ ಫುಟ್ಬಾಲ್ ಆಡುವುದು. ನಾನು ಯಾವುದೇ ನೀತಿಯನ್ನು ಬೆಂಬಲಿಸಲು ಟರ್ಕಿ ಅಧ್ಯಕ್ಷರನ್ನು ಭೇಟಿಯಾಗಿಲ್ಲ ’’ ಎಂದು ಒಝಿಲ್ ಸ್ಪಷ್ಟಪಡಿಸಿದ್ದಾರೆ.

"ನಾನು ಜರ್ಮನಿಯ ಶರ್ಟನ್ನು ಗೌರವ  ಮತ್ತು ಉತ್ಸಾಹದಿಂದ ಧರಿಸುತ್ತಿದ್ದೆ, ಆದರೆ ಇನ್ನೆಂದೂ ಜರ್ಮನಿ ಶರ್ಟ್ ಧರಿಸಿ ಆಡಲಾರೆ."

" ಡಿ ಎಫ್ ಎ(ಜರ್ಮನ್ ಫುಟ್ಬಾಲ್ ಅಸೋಸಿಯೇಷನ್) ಮತ್ತು ಅನೇಕ ಇತರರಿಂದ ಕಂಡು ಬಂದ ಟೀಕೆ ನನ್ನನ್ನು ಜರ್ಮನಿ  ತಂಡದ ಶರ್ಟನ್ನು ಧರಿಸದಂತೆ ಮಾಡಿದೆ” ಎಂದು ಹೇಳಿದ್ಧಾರೆ.

2009ರಿಂದ ಜರ್ಮನಿ ತಂಡದ ಪರ  ಆಡುತ್ತಿದ್ದ  ಒಝಿಲ್  92 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ 23 ಗೋಲುಗಳನ್ನು ದಾಖಲಿಸಿದ್ದರು. 2014ರಲ್ಲಿ ಜರ್ಮನಿ ವಿಶ್ವಕಪ್ ಜಯಿಸಲು ಶ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News