ಸುಪ್ರೀಂ ಮೆಟ್ಟಿಲೇರಿದ ಏಶ್ಯನ್ ಗೇಮ್ಸ್ ಅವಕಾಶ ವಂಚಿತ ಪ್ರಾಚಿ, ಛವಿ ಶರಾವತ್

Update: 2018-07-23 09:04 GMT

ಹೊಸದಿಲ್ಲಿ, ಜು.23: ಏಶ್ಯನ್ ಗೇಮ್ಸ್ 4X400ಮೀ ಮಹಿಳೆಯರ  ರಿಲೇ  ತಂಡದ ಆಯ್ಕೆಯಲ್ಲಿ  ತಮಗೆ ಅನ್ಯಾಯವಾಗಿರುವುದನ್ನು ಪ್ರಶ್ನಿಸಿ  ಉತ್ತರ ಪ್ರದೇಶದ ಓಟಗಾರ್ತಿಯರಾದ ಪ್ರಾಚಿ ಚೌಧರಿ ಮತ್ತು ಛವಿ ಶರಾವತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

2018ರ ಏಶ್ಯನ್ ಗೇಮ್ಸ್ 4X400ಮೀ ರಿಲೇ ತಂಡದಲ್ಲಿ ಅರ್ಹತೆ  ಪಡೆಯುವ ಎಲ್ಲ ಅರ್ಹತೆ ಇದ್ದರೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ   ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ ಐ)  ಮತ್ತು ಕೇಂದ್ರ ಕ್ರೀಡಾ ಸಚಿವಾಲಯದ ವಿರುದ್ಧ ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದಾರೆ.

ಗುವಾಹತಿಯಲ್ಲಿ ನಡೆದ 58ನೇ ನ್ಯಾಶನಲ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಮೀಟರ್ ಓಟದಲ್ಲಿ ಪ್ರಾಚಿ ಮೂರನೇ ಸ್ಥಾನದೊಂದಿಗೆ ಕಂಚು ಮತ್ತು ಛವಿ ಶರಾವತ್ ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ ಏಶ್ಯನ್ ಗೇಮ್ಸ್ ರಿಲೇ ತಂಡದಲ್ಲಿ ಇವರಿಗೆ ಅವಕಾಶ ನಿರಾಕರಿಸಲಾಗಿತ್ತು.  

ಸಾಮಾನ್ಯವಾಗಿ 400 ಮೀಟರ್ ಓಟ ಮತ್ತು 4X400ಮೀ ರಿಲೇ ತಂಡದಲ್ಲಿ ಒಟ್ಟು 8 ಮಂದಿ  ಅಥ್ಲೀಟ್‌ಗಳು ಇರುತ್ತಾರೆ. ಈ ಪೈಕಿ ಇಬ್ಬರು 400 ಮೀಟರ್ ಓಟದಲ್ಲಿ , ನಾಲ್ವರು 4X400ಮೀ ರಿಲೇ ತಂಡದಲ್ಲಿ ಹಾಗೂ ಇಬ್ಬರು ಮೀಸಲು  ಅಥ್ಲೀಟ್‌ಗಳು.

ಏಶ್ಯನ್ ಗೇಮ್ಸ್ ನ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಚಿ ಮತ್ತು ಶರಾವತ್ ಭಾಗವಹಿಸಿ  ಅಂತಿಮ 4ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರಿಗೆ ಅವಕಾಶ ನಿರಾಕರಿಸಲಾಗಿದೆ.  ಇವರ ಬದಲಿಗೆ ವಿಜಯ್ ಕುಮಾರಿ, ವಿಶ್ಮಯ ವಿ.ಕೆ ಮತ್ತು ಜಿಸ್ನಾ ಮ್ಯಾಥ್ಯು ಇವರಿಗೆ ಸ್ಥಾನ ನೀಡಲಾಗಿದೆ. ಇವರು ಫೈನಲ್ ರೇಸ್ ನಲ್ಲಿ ಪಾಲ್ಗೊಂಡಿರಲಿಲ್ಲ.  6, 7, 8 ಸ್ಥಾನ ಪಡೆದಿದ್ದ ಎಂಆರ್ ಪೂವಮ್ಮ, ಸರಿತಾಬೆನ್ ಗಾಯಕ್ ವಾಡ್ ಮತ್ತು ಸೋನಿಯಾ ಬೈಶಿಯ   ತಂಡದಲ್ಲಿ ಅವಕಾಶ ಪಡೆದಿದ್ದರು.

ತಮ್ಮನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಎಎಫ್ ಐಗೆ ನಿರ್ದೇಶನ ನೀಡುವಂತೆ ಪ್ರಾಚಿ ಮತ್ತು ಶರಾವತ್  ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.   ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯ ಪೀಠ   ಜುಲೈ 26ರ ಒಳಗಾಗಿ  ಈ ಸಂಬಂಧ ಉತ್ತರ ನೀಡುವಂತೆ ಎಎಫ್ ಐ ಮತ್ತು ಕ್ರೀಡಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News