ಬರಹಗಾರರ ಮಾರ್ಗದರ್ಶನಕ್ಕಾಗಿ ಕೃತಿಗಳ ರಚನೆ: ಅರವಿಂದ ಮಾಲಗತ್ತಿ

Update: 2018-07-23 13:16 GMT

ಬೆಂಗಳೂರು, ಜು.23: ಸಾಹಿತ್ಯೇತರ ಬರಹಗಾರರಿಗೆ ಬರವಣಿಗೆಯ ಕುರಿತು ಮಾರ್ಗದರ್ಶನ ಕಲ್ಪಿಸುವುದು ವಜ್ರದ ಬೇರುಗಳು-ಸಾಹಿತ್ಯ ಪ್ರಕಾರ ಮಾಲಿಕೆಯ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ತಿಳಿಸಿದರು.

ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ನಗರದ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ‘ವಜ್ರದ ಬೇರುಗಳು-ಸಾಹಿತ್ಯ ಪ್ರಕಾರ ಮಾಲಿಕೆ’ ಸಮೂಹ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡದಲ್ಲಿ ಸಾಹಿತ್ಯೇತರ ಬರಹಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯದ ನವೋದಯ, ನವ್ಯ, ನವ್ಯೋತ್ತರ, ಬಂಡಾಯದ ಸಾಹಿತ್ಯ ಬೆಳೆದು ಬಂದ ಬಗೆ, ಹಾಗೂ ಹಳೆ ಗನ್ನಡ ಹಾಗೂ ಆಧುನಿಕ ಸಾಹಿತ್ಯದ ಕುರಿತು ಪ್ರಾಥಮಿಕ ಮಾಹಿತಿಯನ್ನೊಳಗೊಂಡ ವಿವಿಧ ಪ್ರಕಾರದ ಕೃತಿಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಾಹಿತ್ಯ ವಲಯದಿಂದಾಚೆಗೆ ಹಲವು ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಯಲ್ಲಿ ಉತ್ಸುಕರಾಗಿರುತ್ತಾರೆ. ಆದರೆ, ಇವರಿಗೆ ಯಾವ ಶೈಲಿಯಲ್ಲಿ ಬರವಣಿಗೆಯನ್ನು ರೂಪಿಸಬೇಕೆಂಬ ಮಾಹಿತಿಯ ಕೊರತೆ ಇರುತ್ತದೆ. ಅಂತಹವರನ್ನು ಉದ್ದೇಶಿಸಿ ಕೈಪಿಡಿಯ ಮಾದರಿಯಲ್ಲಿ ಕೃತಿಗಳನ್ನು ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆಯ ಸಂಪಾದಕ ಡಾ.ಬಸವರಾಜ ಕಲ್ಗುಡಿ ಮಾತನಾಡಿ, ಪ್ರಮುಖ ಲೇಖಕರು ಒಂದೇ ಪ್ರಕಾರದಲ್ಲಿ ಸಾಧಿಸಿರುವ ಭಿನ್ನತೆ ಮತ್ತು ವೈಶಿಷ್ಟತೆಗಳನ್ನು ತಿಳಿಯುವುದೇ ’ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ’ಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಆಯಾ ಪ್ರಕಾರಗಳಲ್ಲಿ ಬರವಣಿಗೆ ಮಾಡಲು ತೊಡಗುವ ಯುವ ಬರಹಗಾರರಿಗೆ ಇದು ಉತ್ತಮ ಕೈಪಿಡಿಯಾಗಲಿದೆ ಎಂದು ತಿಳಿಸಿದರು.

ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆಯ ಸಲಹಾ ಸಮಿತಿಯ ಸದಸ್ಯ ಡಾ.ಎನ್.ಎಸ್. ತಾರಾನಾಥ್, ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಸೇರಿದಂತೆ ಹಲವು ಸಾಹಿತಿಗಳು ಉಪಸ್ಥಿತರಿದ್ದರು.

ವಜ್ರದ ಬೇರುಗಳಡಿಯ ಸಾಹಿತ್ಯ ಪ್ರಕಾರಗಳು
ತಾತ್ವಿಕ ಅಧ್ಯಯನ, ಹಳಗನ್ನಡ ಸಾಹಿತ್ಯ ಪ್ರಕಾರಗಳು, ನಡುಗನ್ನಡ ಸಾಹಿತ್ಯ ಪ್ರಕಾರಗಳು, ಗದ್ಯದ ನೆಲೆಗಳು, ಕಾವ್ಯ, ಮಹಾಕಾವ್ಯ, ಪಾಶ್ಚಾತ್ಯ ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ಸಾಹಿತ್ಯ ವಿಮರ್ಶೆ, ಜನಪ್ರಿಯ ಸಾಹಿತ್ಯ, ಅಂಕಣ ಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಸಂಶೋಧನೆ, ಅನುವಾದ, ಜಾನಪದ ಕುರಿತು ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುವಂತೆ ಕೈಪಿಡಿ ಮಾದರಿಯಲ್ಲಿ ಕೃತಿಗಳನ್ನು ರಚಿಸಲಾಗುತ್ತಿದೆ.
-ಅರವಿಂದ ಮಾಲಗತ್ತಿ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News