ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ: ದಲಿತ ಸಚಿವರ ನಿವಾಸದೆದುರು ಧರಣಿ
ಬೆಂಗಳೂರು, ಜು.23: ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಯನ್ನು ಅನುಷ್ಠಾನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ದಲಿತ ಸಮುದಾಯದ ಸಚಿವರ ನಿವಾಸದ ಮುಂಭಾಗ ಬೃಹತ್ ಧರಣಿ ನಡೆಸಲಾಯಿತು.
ಸೋಮವಾರ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ ಖರ್ಗೆ, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ ಹಾಗೂ ಎನ್.ಮಹೇಶ್ ನಿವಾಸದ ಮುಂದೆ ದಲಿತ ಸಂಘಟನೆಗಳ ಕಾರ್ಯಕರ್ತರು, ಎಸ್ಸಿ-ಎಸ್ಟಿ ಅಧಿಕಾರಿಗಳ ಹಾಗೂ ನೌಕರರ ಭಡ್ತಿ, ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ, ರಾಜ್ಯ ಸರಕಾರ ಕಾಯ್ದೆ ಅನುಷ್ಠಾನಗೊಳಿಸದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಎಂ.ವೆಂಕಟಸ್ವಾಮಿ ಮಾತನಾಡಿ, ಜೆಡಿಎಸ್ ನಾಯಕರಿಗೆ ತಮ್ಮ ಸ್ವಹಿತಾಸಕ್ತಿಯ ಮುಂದೆ ಮತ್ಯಾವುದೂ ಮುಖ್ಯವಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಇವರ ಸ್ವಾರ್ಥಕ್ಕಾಗಿ ದಲಿತ ಸಮುದಾಯದ ನೌಕರರು-ಅಧಿಕಾರಿಗಳ ಬದುಕು ಸರ್ವನಾಶವಾಗುತ್ತಿದೆ ಎಂದು ಕಿಡಿಕಾರಿದರು.
ಸಚಿವ ರೇವಣ್ಣ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಆಗಿದ್ದ ಮುಂಭಡ್ತಿಯನ್ನು ಸಚಿವ ರೇವಣ್ಣ ಒತ್ತಡ ಹಾಕಿ ಹಿಂಪಡೆದಿದ್ದಾರೆ. ಸಚಿವರ ಈ ನಡೆಯನ್ನು ದಲಿತ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ. ಜೆಡಿಎಸ್ ನಾಯಕರು ದಲಿತ ವಿರೋಧಿ ನಿಲುವಿನಿಂದ ಹೊರಬಂದು ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಸೋರಹುಣಸೆ ವೆಂಕಟೇಶ್ ಮಾತನಾಡಿ, ಎಸ್ಸಿ-ಎಸ್ಟಿ ಸರಕಾರಿ ಅಧಿಕಾರಿ, ನೌಕರರ ಭಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಇದೇ ಜೂ.14ರಂದು ಅಂಕಿತ ಹಾಕಿದ್ದಾರೆ. ರಾಜ್ಯ ಸರಕಾರವೂ ಜೂ.23ರಂದು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಆದರೆ, ಇಂದಿನ ಮೈತ್ರಿ ಸರಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ನಿಯಮಬಾಹಿರವಾಗಿ ಹಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ 8 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರಿಗೆ ಹಿಂಭಡ್ತಿ ನೀಡಲಾಗಿದೆ. ಜೊತೆಗೆ ಸುಮಾರು 60 ಸಾವಿರ ಅಧಿಕಾರಿ ಮತ್ತು ನೌಕರರ ಸೇವಾ ಜೇಷ್ಠತೆಯನ್ನು ಕೆಳಗಿನ ಕ್ರಮಾಂಕದಲ್ಲಿ ನಿಗದಿಪಡಿಸಲಾಗಿದೆ. ಇದರ ಪರಿಣಾಮ ಹಿಂಭಡ್ತಿ ಪಡೆದ ಮೂವರು ನೌಕರರು ಇದರ ಆಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಈ ಕೂಡಲೇ ಎಸ್ಸಿ-ಎಸ್ಟಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ತಡೆಯಬೇಕು. ಜೊತೆಗೆ, ದಲಿತ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಈ ಕುರಿತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯ ಒದಗಿಸಬೇಕು ಎಂದು ದಲಿತ ಒಕ್ಕೂಟದ ಸದಸ್ಯರು ಆಗ್ರಹಿಸಿದರು.
ಜು.25ರಂದು ವಿಧಾನಸೌಧ ಮುತ್ತಿಗೆ
ಸಚಿವ ಎಚ್.ಡಿ.ರೇವಣ್ಣ ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಬರದಂತೆ ತಡೆಯುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅರ್ಥೈಸಿಕೊಂಡು ದಲಿತ ನೌಕರರ ನ್ಯಾಯಯುತ ಹಕ್ಕನ್ನು ದೊರಕಿಸಿಕೊಡಬೇಕು. ಇಲ್ಲದಿದ್ದರೆ, ಜು.25ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಹಾಗೂ ನಂತರದ ದಿನಗಳಲ್ಲಿ ರಾಜ್ಯದೆಲ್ಲೆಡೆ ಹೋರಾಟವನ್ನು ನಿರಂತರಗೊಳಿಸಲಾಗುವುದು.
-ಡಾ.ವೆಂಕಟಸ್ವಾಮಿ ಅಧ್ಯಕ್ಷ, ದಲಿತ ಸಂಘಟನೆಗಳ ಒಕ್ಕೂಟ