×
Ad

ದೌರ್ಜನ್ಯಕ್ಕೊಳಗಾದವರಿಗೆ ತ್ವರಿತಗತಿ ನ್ಯಾಯ ದೊರಕಿಸಿಕೊಡಿ: ಸಚಿವ ಪ್ರಿಯಾಂಕ್ ಖರ್ಗೆ

Update: 2018-07-23 19:00 IST

ಬೆಂಗಳೂರು, ಜು. 23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳಲ್ಲಿ ‘ಎಸ್ಸಿ-ಎಸ್ಟಿ ದೌರ್ಜನ್ಯ ಪ್ರತಿಬಂಧ ಕಾಯ್ದೆ’ ಕೈಪಿಡಿ ಮಾಹಿತಿಯನ್ನು ಬಳಸಿಕೊಂಡು ದೌರ್ಜನ್ಯಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ಮಾಡಿದ್ದಾರೆ.

ಸೋಮವಾರ ಸಮಾಜ ಕಲ್ಯಾಣ ಇಲಾಖೆ ಹೊರತಂದಿರುವ ‘ಎಸ್ಸಿ-ಎಸ್ಟಿ ದೌರ್ಜನ್ಯ ಪ್ರತಿಬಂಧ ಕಾಯ್ದೆ’ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸುವ ವೇಳೆ ಉಂಟಾಗುವ ಗೊಂದಲಗಳ ನಿವಾರಣೆಗಾಗಿ ಇಲಾಖೆ ಸಿದ್ಧಪಡಿಸಿರುವ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಎಸ್ಸಿ-ಎಸ್ಟಿ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಅಧಿನಿಯಮ-2015 ಮತ್ತು ತಿದ್ದುಪಡಿ ನಿಯಮಗಳು 2016ರಡಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಗಳು ಮತ್ತು ಪರಿಹಾರ ವಿವರಗಳನ್ನು ಈ ಕೈಪಿಡಿ ಒಳಗೊಂಡಿರುತ್ತದೆ. ದೌರ್ಜನ್ಯ ಪ್ರತಿಬಂಧ ನಿಯಮಗಳಡಿ ಈಗ ದಾಖಲಾಗುತ್ತಿರುವ ಪ್ರಥಮ ವರ್ತಮಾನ ವರದಿಗಳಲ್ಲಿ ನಿರ್ದಿಷ್ಟ ಕಲಂಗಳನ್ನು ನಮೂದಿಸದೆ ಇರುವುದರಿಂದ ದೌರ್ಜನ್ಯಕ್ಕೊಳಗಾದವರಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲವೆಂಬ ಕಾರಣದಿಂದ ಇಲಾಖೆಯು ಈ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದರು.

ದೌರ್ಜನ್ಯ ಪ್ರತಿಬಂಧ ತಿದ್ದುಪಡಿ ಅಧಿನಿಯಮದಡಿ ದೌರ್ಜನ್ಯಕ್ಕೊಳಗಾಗುವ ವಿವಿಧ ಪ್ರಕರಣಗಳಲ್ಲಿ ಸೂಕ್ತ ಕಲಂಗಳನ್ನು ಹಾಗೂ ದಂಡನೆಗಳ ವಿವರಗಳನ್ನು ಈ ಕೈಪಿಡಿಯಲ್ಲಿ ನಮೂದಿಸಲಾಗಿದ್ದು, ಸರಕಾರಿ ನೌಕರರ ಕರ್ತವ್ಯಗಳ ವಿವರಗಳನ್ನು ಈ ಕೈಪಿಡಿಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಕೆಲ ಪ್ರಕರಣಗಳಲ್ಲಿ ಸರಿಯಾದ ಕಲಂಗಳು ಉಲ್ಲೇಖಿತವಾಗದಿರುವ ಕಾರಣದಿಂದ ನ್ಯಾಯಾಲಯಗಳಲ್ಲಿ ವಾದ ಮಂಡಿಸುವುದು ಕಷ್ಟಸಾಧ್ಯ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಕೈಪಿಡಿಯಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ಗಂಭೀರ ಸ್ವರೂಪದ ದೌರ್ಜನ್ಯ ಪ್ರಕರಣಗಳು ಘಟಿಸುವ ಸಂದರ್ಭಗಳಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಡಿಸಿ, ಎಸ್ಪಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಆಸ್ತಿ, ಪ್ರಾಣಹಾನಿ ಬಗ್ಗೆ ಪರಿಶೀಲಿಸಿ ರಕ್ಷಣೆ ಮತ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದು, ಶಾಂತಿ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಪರಿಹಾರ ವಿತರಣೆ, ಸಂತ್ರಸ್ತರಿಗೆ ಊಟ, ನೀರು, ವಸತಿ, ಬಟ್ಟೆ, ವೈದ್ಯಕೀಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.

ಪೊಲೀಸರು ಎಫ್‌ಐಆರ್ ಸಲ್ಲಿಸುವ ವೇಳೆ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಒದಗಿಸುವ ಸಲುವಾಗಿ ಸೂಕ್ತ ಕಲಂನ್ನು ಖಚಿತಪಡಿಸಿಕೊಂಡು ಕ್ರಮಕೈಗೊಳ್ಳಲು ಈ ಕೈಪಿಡಿ ಸಹಾಯಕ. ಸಂತ್ರಸ್ತ ವ್ಯಕ್ತಿ ಅಥವಾ ಅವಲಂಬಿತರಿಗೆ ನ್ಯಾಯಾಲಯದ ವಿಚಾರಣೆ ಹಾಗೂ ಜಾಮೀನು ಪಡೆಯುವ ವಿಷಯದಲ್ಲಿ ಸರಕಾರಿ ವ್ಯಾಜ್ಯ ಮತ್ತು ಅಭಿಯೋಗ ಇಲಾಖೆಯು ನಿರ್ವಹಿಸಬೇಕಾದ ಕರ್ತವ್ಯಗಳ ವಿವರಗಳನ್ನು ಈ ಕೈಪಿಡಿ ಹೊಂದಿದ್ದು, ಭಾರತೀಯ ದಂಡಸಂಹಿತೆಯಡಿ ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಕಲ್ಪಿಸಲಾಗಿರುವ ಅವಕಾಶಗಳ ವಿವರಗಳನ್ನು ಅಳವಡಿಸಲಾಗಿದೆ.

ಡಿಸಿಎಂ ಶ್ಲಾಘನೆ: ಎಸ್ಸಿ-ಎಸ್ಟಿ ವರ್ಗದ ಮೇಲಿನ ದೌರ್ಜನ್ಯ ಪ್ರತಿಬಂಧ ಕಾಯ್ದೆ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಕೈಪಿಡಿ ಹೊರತಂದಿರುವುದು ಶ್ಲಾಘನೀಯ. ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧ ಮತ್ತು ಪರಿಹಾರ ವಿವರ ಒಳಗೊಂಡ ಈ ಕೈಪಿಡಿ ಪೊಲೀಸ್ ಅಧಿಕಾರಿಗಳಿಗೆ ಉಪಯುಕ್ತ. ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ನೀಡುವ ನಿಟ್ಟಿನಲ್ಲಿ ಈ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಈ ಕೈಪಿಡಿ ನೆರವಾಗಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.

ಈ ವೇಳೆ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ. ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ ಇದ್ದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ, ಹಲ್ಲೆ ಮತ್ತಿತರ ಪ್ರಕರಣಗಳಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ಪೊಲೀಸರು ಪ್ರಥಮ ಮಾಹಿತಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಗೊಂದಲಗಳ ನಿವಾರಣೆಗಾಗಿ ಇಲಾಖೆಯು ಕೈಪಿಡಿಯೊಂದನ್ನು ಸಿದ್ಧಪಡಿಸಿದ್ದು, ಎಲ್ಲ ಪೊಲೀಸ್ ಠಾಣೆಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ’
-ಪ್ರಿಯಾಂಕ್ ಖರ್ಗೆ,  ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News