ಶಾಸಕ ಗೂಳಿಹಟ್ಟಿ ಶೇಖರ್‌ರಿಂದ ಪ್ರಾಣ ಬೆದರಿಕೆ: ಆರೋಪ
ಬೆಂಗಳೂರು, ಜು.22: ಸಾಲದ ರೂಪದಲ್ಲಿ ಕೊಟ್ಟ ಹಣವನ್ನು ವಾಪಸ್ಸು ನೀಡುವಂತೆ ಕೇಳಿದ್ದಕ್ಕೆ ಶಾಸಕ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೊಸಕೆರೆ ನಿವಾಸಿ ಮಣಿ ಆರೋಪಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ನನ್ನಿಂದ ಒಂದು ಬಾರಿ ಐದು ಲಕ್ಷ ಹಾಗೂ ಮತ್ತೊಂದು ಬಾರಿ ಮೂರು ಲಕ್ಷ ಹಣ ಪಡೆದಿದ್ದರು. ಅದನ್ನು ವಾಪಸ್ಸು ನೀಡುವಂತೆ ಕೇಳಿದರೆ ನಿನ್ನನ್ನು ಹಾಗೂ ನಿಮ್ಮ ಕುಟುಂಬದವರನ್ನು ಇಲ್ಲವಾಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಹಣ ನೀಡುವಂತೆ ಅವರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಎರಡು ಚೆಕ್ ನೀಡಿದ್ದರು. ಆದರೆ, ಹಣ ಪಡೆಯಲು ಬ್ಯಾಂಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೆಕ್ ಬೌನ್ಸ್ ಆಗಿದೆ ಎಂದಿದ್ದರು. ಈ ಸಂಬಂಧ ಅವರನ್ನು ಪ್ರಶ್ನಿಸಿದ ವೇಳೆ ಹಲ್ಲೆ ಮಾಡಲು ಮುಂದಾಗಿದ್ದರು. ಅಲ್ಲದೆ, ಮತ್ತೊಂದು ಬಾರಿ ಹಣ ಕೇಳಲು ಬಂದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ, ಗೂಳಿಹಟ್ಟಿ ಶೇಖರ್ ನೋಟಿಸ್ ಅನ್ನು ತಿರಸ್ಕರಿಸಿದ್ದಾರೆ. ಹಣಕ್ಕಾಗಿ ನಾನು ಅವರ ಮನೆಗೆ ತೆರಳಿದ ವೇಳೆ ಅವರ ಪತ್ನಿ, ತಮ್ಮ ರಾಮಯ್ಯರೊಂದಿಗೆ ಸೇರಿ ಸ್ಥಳದಲ್ಲಿಯೇ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.