×
Ad

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2018-07-23 19:34 IST

ಹೊಸದಿಲ್ಲಿ,ಜು,23: 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗಳಿಗೆ ಮರಣ ದಂಡನೆ ಸೇರಿದಂತೆ ಲೈಂಗಿಕ ದೌರ್ಜನ್ಯಗಳನ್ನೆಸಗುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡುವ ಕ್ರಿಮಿನಲ್ ಕಾನೂನು(ತಿದ್ದುಪಡಿ) ಮಸೂದೆ,2018ನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ತಿದ್ದುಪಡಿ ಮಸೂದೆಯು ಸಂಸತ್‌ನಲ್ಲಿ ಅಂಗೀಕಾರಗೊಂಡ ಬಳಿಕ ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಹಾಗೂ ಉತ್ತರ ಪ್ರದೇಶದ ಉನ್ನಾವೊದಲ್ಲಿ ಮಹಿಳೆಯೋರ್ವಳ ಅತ್ಯಾಚಾರ ಕುರಿತಂತೆ ದೇಶಾದ್ಯಂತ ಆಕ್ರೋಶ ಸ್ಫೋಟಗೊಂಡ ಬಳಿಕ ಸರಕಾರವು ಎ.21ರಂದು ಹೊರಡಿಸಿದ್ದ ಕ್ರಿಮಿನಲ್ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆಯು ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.

12ರಿಂದ 16 ವರ್ಷ ವಯೋಮಾನದ ಮಹಿಳೆಯರ ಮೇಲಿನ ಇತ್ತೀಚಿನ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಘಟನೆಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ನಡುಗಿಸಿವೆ. ಆದ್ದರಿಂದ ಈ ವಯೋಮಾನದ ಮಹಿಳೆಯರ ಮೇಲೆ ಇಂತಹ ದೌರ್ಜನ್ಯಗಳನ್ನು ತಡೆಯಲು ಭೀತಿ ಹುಟ್ಟಿಸುವಂತಹ ಕಾನೂನು ಅಗತ್ಯವಾಗಿದೆ ಎಂದು ಮಸೂದೆಯನ್ನು ಮಂಡಿಸಿದ ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಹೇಳಿದರು.

ಅತ್ಯಾಚಾರ,ನಿರ್ದಿಷ್ಟವಾಗಿ 12 ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವನ್ನು ಎಸಗುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಈ ಮಸೂದೆಯು ಅವಕಾಶ ಕಲ್ಪಿಸುತ್ತದೆ. ಇಂತಹವರಿಗೆ ಮರಣ ದಂಡನೆಯನ್ನು ವಿಧಿಸಲು ಮಸೂದೆಯು ಅವಕಾಶ ನೀಡುತ್ತದೆ.

ಮಹಿಳೆಯ ಮೇಲೆ ಅತ್ಯಾಚಾರದ ಪ್ರಕರಣದಲ್ಲಿ ಕನಿಷ್ಠ ಏಳು ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ಹತ್ತು ವರ್ಷಗಳಿಗೆ ಹೆಚ್ಚಿಸಲಾಗಿದೆ ಮತ್ತು ಇದನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದಾಗಿದೆ.

16 ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದ ಅಪರಾಧಿಗಳಿಗೆ ಕನಿಷ್ಠ ಶಿಕ್ಷೆಯನ್ನು 10 ವರ್ಷಗಳಿಂದ 20 ವರ್ಷಗಳಿಗೆ ಹೆಚ್ಚಿಸಲಾಗಿದೆ ಮತ್ತು ಅಪರಾಧಿಯು ಸಾಯುವವರೆಗೆ ಈ ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.

16 ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗುವವರು ಇನ್ನು ಮುಂದೆ ತಮ್ಮ ಜೀವಮಾನ ಪರ್ಯಂಂತ ಜೈಲಿನಲ್ಲಿಯೇ ಕೊಳೆಯಬೇಕಾಗುತ್ತದೆ.

  12 ವರ್ಷಕ್ಕೂ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಸೂಚಿಸಲಾಗಿದ್ದು,ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಮತ್ತು ಇದನ್ನು ಆಜೀವ ಜೈಲುಶಿಕ್ಷೆ ಅಥವಾ ಮರಣ ದಂಡನೆಗೆ ಹೆಚ್ಚಿಸಲೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. 12ವರ್ಷದೊಳಗಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆಜೀವ ಜೈಲುಶಿಕ್ಷೆ ಅಥವಾ ಮರಣ ದಂಡನೆಯನ್ನು ವಿಧಿಸಬಹುದಾಗಿದೆ.

 ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ ಮತ್ತು ವಿಚಾರಣೆಯನ್ನೂ ಮಸೂದೆಯು ಕಡ್ಡಾಯಗೊಳಿಸಿದೆ. ಅತ್ಯಾಚಾರದ ಎಲ್ಲ ಪ್ರಕರಣಗಳ ತನಖೆಯು ಎರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಬೇಕು ಮತ್ತು ವಿಚಾರಣೆಯೂ ಎರಡು ತಿಂಗಳಲ್ಲಿ ಅಂತ್ಯಗೊಳ್ಳಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಮೇಲ್ಮನವಿಗಳ ಇತ್ಯರ್ಥಕ್ಕೆ ಆರು ತಿಂಗಳ ಗಡುವನ್ನು ನಿಗದಿಗೊಳಿಸಲಾಗಿದೆ.

16 ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಇನ್ನು ಮುಂದೆ ಗಗನಕುಸುಮವಾಗಲಿದೆ.

10ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳಲ್ಲಿ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸುವ 15 ದಿನಗಳ ಮುನ್ನ ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸಂತ್ರಸ್ತೆಯ ಪ್ರತಿನಿಧಿಗೆ ನೋಟಿಸ್ ನೀಡುವುದನ್ನೂ ಮಸೂದೆಯು ಕಡ್ಡಾಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News