ಸೂಕ್ತ ತಪಾಸಣೆ ಇಲ್ಲದೇ ಡಿಬಿಟಿ ಖಾತೆಗಳಿಗೆ ಕೋಟ್ಯಂತರ ರೂಪಾಯಿ: ಸಿಎಜಿ ಕಳವಳ
ಭಾರತದ ಆಡಿಟರ್ ಜನರಲ್ ಸಂಜಯ್‍ಮೂರ್ತಿ (Photo credit: ddindia.co.in)
ನಾಗ್ಪುರ: ದೇಶಾದ್ಯಂತ ಜಾರಿಯಲ್ಲಿರುವ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ಆಡಿಟರ್ ಜನರಲ್ ಸಂಜಯ್‍ಮೂರ್ತಿ, "ದುರ್ಬಲ ಡಾಟಾ ಸಮನ್ವಯ ಮತ್ತು ಇಲಾಖೆಗಳ ನಡುವಿನ ಸಂಪರ್ಕದ ಕೊರತೆಯಿಂದಾಗಿ ಕಡ್ಡಾಯ ಪರಿಶೀಲನೆಯಿಲ್ಲದೇ ಕೋಟ್ಯಂತರ ರೂಪಾಯಿ ಮೊತ್ತ ಫಲಾನುಭವಿ ಖಾತೆಗಳಿಗೆ ಹರಿದಿದೆ" ಎಂದು ಹೇಳಿದ್ದಾರೆ.
"ಡೂಪ್ಲಿಕೇಶನ್ ತಡೆಯುವ ಮತ್ತು ಮರು ಪರಿಶೀಲನೆ ನಡೆಸುವ ಮಟ್ಟದಲ್ಲಿ ಭಾರಿ ಅಂತರ ಕಂಡುಬಂದಿದೆ. ಸರ್ಕಾರಿ ಇಲಾಖೆಗಳು ಪರಸ್ಪರ ಸಂಪರ್ಕವಿಲ್ಲದೇ ಕಾರ್ಯನಿರ್ವಹಿಸುವ ಮಟ್ಟ ಎಷ್ಟಿದೆಯೆಂದರೆ ಒಂದೇ ಇಲಾಖೆಗೆ ವಿವಿಧ ಜಂಟಿ ಕಾರ್ಯರ್ಶಿಗಳು ಒಂದೇ ಡಾಟಾಬೇಸ್ ಪರಾಮರ್ಶಿಸುತ್ತಿಲ್ಲ" ಎಂದು ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಐಆರ್‍ಎಸ್ ಅಧಿಕಾರಿಗಳ ತರಬೇತಿ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಕಳವಳ ವ್ಯಕ್ತಪಡಿಸಿದರು.
"ನಾವು ಜನ ಧನ್, ಆಧಾರ್ ಮತ್ತು ಮೊಬೈಲ್ ಫೋನ್ ಆಧರಿತ ಡಾಟಾಬೇಸ್ ಸಂಪರ್ಕದ ಬಗ್ಗೆ ಮಾತನಾಡಬಹುದು. ಆದಾಗ್ಯೂ ಡಾಟಾಬೇಸ್ ನಿಯೋಜಿಸುವ ಪ್ರೌಢತೆಯ ಮಟ್ಟವನ್ನು ನೋಡಿದರೆ, ಮುಖ್ಯವಾಗಿ ನಾವು ಸೃಷ್ಟಿಸುವ ವರದಿಗಳನ್ನು ನೋಡಿದರೆ ತೀರಾ ಅಂತರ ಇರುವುದು ಕಾಣಿಸುತ್ತದೆ" ಎಂದು ಹೇಳಿದರು.
"ಇವೆಲ್ಲ ಆಧಾರ್ ಆಧರಿತ ಫಲಾನುಭವಿಗಳು ಎಂದು ನಾವು ಹೇಳುತ್ತೇವೆ; ಆದರೆ ಆದರೆ ಡಿಬಿಟಿ ಮಿಷನ್ ಕಡ್ಡಾಯಪಡಿಸಿದಂತೆ ಡೂಪ್ಲಿಕೇಶನ್ ತಡೆಯುವ ನಿಟ್ಟಿನಲ್ಲಿ ಅಥವಾ ಡಾಟಾಬೇಸ್ ಮರುಪರಿಶೀಲನೆ ದೃಢೀಕರಿಸುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳು ಈ ವ್ಯವಸ್ಥೆಗೆ ವಿತ್ತೀಯ ಸೇರ್ಪಡೆ ಯೋಜನೆಯಡಿ ಮೂಲಭೂತ ಪರಿಶೀಲನೆ ಇಲ್ಲದೇ ಹರಿಯುತ್ತಿದೆ" ಎಂದು ವಿಶ್ಲೇಷಿಸಿದರು.