ಸುಪ್ರೀಂ ಕೋರ್ಟ್ ಆದೇಶದನ್ವಯ ಭಡ್ತಿ: ಸಚಿವ ಎಚ್.ಡಿ.ರೇವಣ್ಣ

Update: 2018-07-23 14:17 GMT

ಬೆಂಗಳೂರು, ಜು. 23: ಲೋಕೋಪಯೋಗಿ ಇಲಾಖೆಯಲ್ಲಿನ ಎಸ್ಸಿ-ಎಸ್ಟಿ ನೌಕರರಿಗೆ ಭಡ್ತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶದ ನಿರೀಕ್ಷೆಯಲ್ಲಿದ್ದು, ಅದರನ್ವಯ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರ ಕೋರ್ಟ್‌ನಲ್ಲಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋರ್ಟ್ ನೀಡುವ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದರು. ಬೇರೆ ಇಲಾಖೆಯಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಹಸ್ತಕ್ಷೇಪ ಮಾಡಲಿಕ್ಕೆ ನನಗೇನೂ ಹುಚ್ಚು ಹಿಡಿದಿದೆಯೇನು. ಸುಮ್ಮನೆ ಇಲ್ಲಸಲ್ಲದ ಸುದ್ದಿಗಳನ್ನು ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳು ತನ್ನ ಘನತೆ ಗೌರವ ಕಾಪಾಡಿಕೊಂಡು ವರದಿಗಳನ್ನು ಮಾಡಬೇಕು. ಮನಸ್ಸಿಗೆ ತೋಚಿದಂತೆ ವರದಿಗಳನ್ನು ಮಾಡುವುದು ಸಲ್ಲ. ನಮ್ಮ ಭಾಗದಲ್ಲಿ ಕೆಲಸವಾಗಬೇಕಾಗಿತ್ತು. ಅದಕ್ಕೆ ಮುಜರಾಯಿ ಇಲಾಖೆ ಸಚಿವರಿಗೆ ಪತ್ರವೊಂದನ್ನು ನೀಡಿದೆ. ಅದನ್ನೇ ಹಸ್ತಕ್ಷೇಪ ಎಂದರೆ ಹೇಗೆ ಎಂದು ರೇವಣ್ಣ ಪ್ರಶ್ನಿಸಿದರು.

ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ನಾನು ಸಭೆಯನ್ನೇ ಕರೆದಿಲ್ಲ. ಆದರೂ ಸಭೆ ಮಾಡುತ್ತಾರೆಂದು ತೋರಿಸುತ್ತಾರೆ. ಅದೇ ರೀತಿ ತಮ್ಮ ಪುತ್ರ ಯಾರಿಗೋ ಥಳಿಸಿದ ಎಂಬಂತೆ ತೋರಿಸುತ್ತಾರೆ. ಹೊಡೆತ ತಿಂದವನು ನಮ್ಮ ಪಕ್ಷದ ಕಾರ್ಯಕರ್ತ. ಆದರೆ, ನನ್ನ ಮಗನ ಮೇಲೆ ಆರೋಪ ಮಾಡಿದ್ದಾರೆಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News