ಪ್ರತ್ಯೇಕ ಎರಡು ಪ್ರಕರಣ: ಇಬ್ಬರು ಎಸಿಬಿ ಬಲೆಗೆ

Update: 2018-07-23 14:28 GMT

ಬೆಂಗಳೂರು, ಜು.23: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೇರಿ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸಿಕ್ಕಿಬಿದ್ದಿದ್ದಾರೆ.

ಆನೇಕಲ್‌ನ ಸಿಂಗೇನ ಅಗ್ರಹಾರ ನಿವಾಸಿಯೊಬ್ಬರು, ನಾರಾಯಣಘಟ್ಟ ಗ್ರಾಮದಲ್ಲಿ ಪಿತ್ರಾರ್ಜಿತವಾದ ಜಮೀನು ಪೋಡಿ ಮಾಡಿಕೊಡಲು ಸರ್ಜಾಪುರ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ವೇಯರ್ ಎ.ಭಾಸ್ಕರ್, 30 ಸಾವಿರ ರೂ. ಲಂಚಕ್ಕೆ ಬೇಡಿಯಿಟ್ಟಿದ್ದ ಎನ್ನಲಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ಎಸಿಬಿ, ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಭಾಸ್ಕರ್ ವಿರುದ್ಧ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಅದೇ ರೀತಿ, ಗದಗ ನಿವಾಸಿಯೊಬ್ಬರಿಗೆ ಕರ್ನಾಟಕ ಗೃಹ ಮಂಡಳಿವತಿಯಿಂದ ನಿವೇಶನ ಮಂಜೂರಾಗಿತ್ತು. ಆದರೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಶಂಕರಪ್ಪಮೆಣಸಗಿ, ಮಂಜೂರಾದ ನಿವೇಶನವನ್ನು ಕ್ರಮಬದ್ಧಗೊಳಿಸಿ, ಖರೀದಿ ಕರಾರು ಪತ್ರ ಮಾಡಿಕೊಡಲು 15 ಸಾವಿರ ಲಂಚ ನೀಡುವಂತೆ ಒತ್ತಡ ಹೇರಿದ್ದ ಎಂದು ಎಸಿಬಿ ತಿಳಿಸಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು, ಸೋಮವಾರ ಆರೋಪಿ ಶಂಕರಪ್ಪಮೆಣಸಗಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಗದಗ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News