ಹುತಾತ್ಮ ಯೋಧರ ಕುಟುಂಬಗಳಿಗಾಗಿ ಕಲ್ಯಾಣ ಕಾರ್ಯಕ್ರಮ: ಬಸವರಾಜ ಹೊರಟ್ಟಿ

Update: 2018-07-23 14:33 GMT

ಬೆಂಗಳೂರು, ಜು.23: ನಮ್ಮ ರಾಜ್ಯದಲ್ಲಿರುವ ಹುತಾತ್ಮ ಯೋಧರ ಕುಟುಂಬಗಳ ಕಲ್ಯಾಣಕ್ಕೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುವುದಾಗಿ ವಿಧಾನಪರಿಷತ್ತಿನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ‘ಕಾರ್ಗಿಲ್ ಯುದ್ಧದ 19ನೆ ವಿಜಯೋತ್ಸವದ ಅಂಗವಾಗಿ ಶ್ರದ್ಧಾಂಜಲಿ ಕಳಶಕ್ಕೆ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುತಾತ್ಮ ಯೋಧರ ಕುಟುಂಬಗಳಿಗೆ ಯಾವ ರೀತಿಯ ನೆರವನ್ನು ರಾಜ್ಯ ಸರಕಾರದಿಂದ ಕಲ್ಪಿಸಬಹುದು ಎಂಬುದರ ಕುರಿತು ಚರ್ಚಿಸಲು ಒಂದು ವಾರದ ಬಳಿಕ ನನ್ನ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿ, ಚರ್ಚಿಸಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿಯ ಗಮನಕ್ಕೂ ತರುವುದಾಗಿ ಬಸವರಾಜ ಹೊರಟ್ಟಿ ತಿಳಿಸಿದರು.

ದೇಶಾದ್ಯಂತ ನಾವು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ. ಆ ಯುದ್ಧವು 60 ದಿನಗಳ ಕಾಲ ನಡೆಯಿತು. ನಮ್ಮ 527 ಯೋಧರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು. ನಮ್ಮ ಯೋಧರಿಗೆ ದೇಶದ ನಾಗರಿಕರು ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು ಎಂದು ಬಸವರಾಜ ಹೊರಟ್ಟಿ ಹೇಳಿದರು. ನಮ್ಮ ರಾಜ್ಯದ ಯೋಧ ಕೊಪ್ಪದ್ ಮಂಜಿನಡಿಯಲ್ಲಿ ಶೂನ್ಯ ಡಿಗ್ರಿಯ ತಾಪಮಾನದಲ್ಲಿಯೂ ಜೀವನ ಮರಣದ ನಡುವೆ ಹೋರಾಟ ಮಾಡಿದರು. ದೇಶದ ಗಡಿ ರಕ್ಷಣೆಗಾಗಿ ತಮ್ಮ ಜೀವವನ್ನೆ ಮುಡಿಪಾಗಿಡುವ ಯೋಧರ ಕುಟುಂಬದ ಬಗ್ಗೆ ನಾವು ಕಾಳಜಿಯನ್ನು ವಹಿಸಬೇಕು ಎಂದು ಅವರು ಕರೆ ನೀಡಿದರು.

ಸೈನಿಕರು ಮಾಡುವ ತ್ಯಾಗವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ದೇಶಕ್ಕಾಗಿ ತಮ್ಮ ಕುಟುಂಬ, ತಂದೆ, ತಾಯಿ, ಮಕ್ಕಳು, ಬಂಧು, ಬಳಗ ಎಲ್ಲರನ್ನೂ ಬಿಟ್ಟು ನಮಗಾಗಿ ತಮ್ಮ ಜೀವನ ಮುಡಿಪಾಗಿಡುತ್ತಾರೆ. ವಿಜಯೋತ್ಸವದ ಜೊತೆಗೆ ನಾವು ಹುತಾತ್ಮ ಯೋಧರ ಕುಟುಂಬಗಳ ಬಗ್ಗೆಯೂ ಆಲೋಚಿಸಬೇಕು ಎಂದು ಹೊರಟ್ಟಿ ಹೇಳಿದರು.

ದೇಶದ ಗಡಿ ಭಾಗದಲ್ಲಿ ಪ್ರತಿದಿನ ಭಯೋತ್ಪಾದನಾ ದಾಳಿಗಳಿಂದ ನಮ್ಮ ಯೋಧರು ಹುತಾತ್ಮರಾಗುವ ಸುದ್ದಿಗಳನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗುತ್ತದೆ. ಓರ್ವ ಹುತಾತ್ಮ ಯೋಧನ ಪಾರ್ಥಿವ ಶರೀರದ ಮುಂದೆ ಅವರ ಪತ್ನಿ, 'ದೇಶ ಸೇವೆಗಾಗಿ ನನ್ನ ಪತ್ನಿ ಹುತಾತ್ಮರಾಗಿದ್ದಾರೆ. ನನ್ನ ಮಗಳನ್ನು ದೇಶ ಸೇವೆಗಾಗಿ ಸೇನೆಗೆ ಸೇರಿಸುತ್ತೇನೆ' ಎಂದು ಹೇಳಿದ್ದನ್ನು ನೋಡಿದಾಗ ನಾನು ಕಣ್ಣೀರು ಹಾಕಿದ್ದೇನೆ. ಅವರ ತ್ಯಾಗವನ್ನು ನಾವು ವಿವರಿಸಲು ಸಾಧ್ಯವಾಗುವುದಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ನೇವಲ್ ಕಮಾಂಡರ್ ಆಸೀಮ್ ಮಾತನಾಡಿ, ಇವತ್ತು ನಾವು ಕಾರ್ಗಿಲ್ ಯುದ್ಧದ 19ನೆ ವಿಜಯೋತ್ಸವವನ್ನು ಆಚರಿಸುತ್ತದ್ದೇವೆ. ಪ್ರತಿ ವರ್ಷ ಈ ಆಚರಣೆಯು ನಾವು ಸವಾಲುಗಳನ್ನು ಎದುರಿಸಲು ಮತ್ತಷ್ಟು ಸಶಕ್ತರನ್ನಾಗಿಸಲು ಪ್ರೇರಣೆ ನೀಡುತ್ತದೆ. ಕಾರ್ಗಿಲ್ ಯುದ್ಧವು ನಮ್ಮ ಸೇನಾ ಶಕ್ತಿಯನ್ನು ಇಡೀ ವಿಶ್ವದಲ್ಲೆ ಅನಾವರಣ ಮಾಡುವಂತಾಯಿತು ಎಂದರು.

ರಾಜ್ಯ ಸರಕಾರದಿಂಧ ನಮಗೆ ಉತ್ತಮ ಸಹಕಾರ ಸಿಗುತ್ತಿದೆ. ಕಾರವಾರದಲ್ಲಿ ನಾವು ಹಮ್ಮಿಕೊಂಡಿರುವ ಯೋಜನೆಗೆ ಎಲ್ಲ ರೀತಿಯ ನೆರವನ್ನು ಸಕಾಲಕ್ಕೆ ಕಲ್ಪಿಸಲಾಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಹಲವಾರು ಮಹನೀಯ ಯೋಧರ ಪುಣ್ಯಭೂಮಿ ಈ ರಾಜ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಏರ್ ಕಮಾಂಡ್ ಚಂದ್ರಶೇಖರ್ ಮಾತನಾಡಿ, ಕಾರ್ಗಿಲ್ ಯುದ್ಧಭೂಮಿಯು ಸಮುದ್ರಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಲಡಾಕ್ ಭೂಮಿಯು ಸುಮಾರು 13 ಸಾವಿರ ಅಡಿ ಎತ್ತದಲ್ಲಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ನಮ್ಮ ಸೈನಿಕರು ದೇಶಕ್ಕಾಗಿ ಹೋರಾಡುತ್ತಾರೆ ಎಂದರು.

ಈ ಪ್ರದೇಶಕ್ಕೆ ಸಮಪರ್ಕವಾದ ಸಂಪರ್ಕ ವ್ಯವಸ್ಥೆಯಾಗಲಿ, ಸಾರಿಗೆ ವ್ಯವಸ್ಥೆಯೂ ಇಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಯೋಧರು ಹೋರಾಡುವ ಮೂಲಕ ಇಡೀ ದೇಶವೇ ಅವರ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸೇನಾಧಿಕಾರಿಗಳಾದ ಎಸ್.ಸಿ.ಭಂಡಾರಿ, ಡಾ.ಶಂಕರ್, ಕರ್ನಲ್ ಮಂಜೀತ್‌ಸಿಂಗ್, ಕ್ಯಾಪ್ಟನ್ ಚಿದಂಬರಂ, ಡಾ.ಪಿ.ಆರ್.ಚೇತನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News