ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇಬ್ಬರು ಸೆರೆ; 14 ದಿನ ವಶಕ್ಕೆ

Update: 2018-07-23 15:06 GMT

ಬೆಂಗಳೂರು, ಜು.23: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು, ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಹುಬ್ಬಳ್ಳಿಯ ಬನಶಂಕರಿ ದೇವಸ್ಥಾನದ ಹಿಂಭಾಗದ ನಿವಾಸಿ ಅಮಿತ್ ಯಾನೆ ರಾಮಚಂದ್ರ ಬದ್ದಿ(27) ಹಾಗೂ ಗಣೇಶ್ ಮಿಸ್ಕಿ ಬಂಧಿತ ಆರೋಪಿಗಳಾಗಿದ್ದು, ಇಲ್ಲಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಸೇರಿದಂತೆ ಗಂಭೀರ ಅಪರಾಧ ಪ್ರಕರಣದಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಟ್ ಮೂಲಗಳು ತಿಳಿಸಿವೆ.

ಬೈಕ್‌ನಲ್ಲಿ ಅಮಿತ್?: ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಸಿಟ್ ತನಿಖೆ ಮಹತ್ತರ ಘಟ್ಟವನ್ನು ತಲುಪಿದ್ದು, ಬಂಧಿತ ಅಮಿತ್ ಬದ್ದಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿದ್ದಾನೆ. ಪರಶುರಾಮ್ ವಾಗ್ಮೋರೆಯನ್ನು ಬೈಕ್‌ನಲ್ಲಿ ಗೌರಿ ಮನೆಗೆ ಕರೆದುಕೊಂಡು ಬಂದಿದ್ದು. ಜೊತೆಗೆ ಕೃತ್ಯಕ್ಕೆ ಬಳಸಿದ ಪಿಸ್ತೂಲು ವಾಪಸ್ಸು ಪಡೆದು ತಲೆಮರೆಸಿಕೊಂಡಿದ್ದು, ಇದೇ ಆರೋಪಿ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ 9 ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಅಮಿತ್, ಗಣೇಶ್ ಬಗ್ಗೆ ಬಾಯಿಬಿಟ್ಟಿದ್ದರು. ಹೀಗಾಗಿಯೇ, ಅವರನ್ನು ಸಿಟ್ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೋಷಕರಿಗೂ ಮಾಹಿತಿ ನೀಡಿ, ಸಂಪರ್ಕಿಸುವಂತೆ ಪತ್ರವೊಂದರಲ್ಲಿ ಉಲ್ಲೇಖ ಮಾಡಿದ್ದಾರೆ.

14 ದಿನ ವಶಕ್ಕೆ: ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ನಗರದ ಮೂರನೆ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಸಿಟ್(ಎಸ್‌ಐಟಿ) ಪರ ವಕೀಲರು ವಾದ ಮಂಡಿಸಿ ಆರೋಪಿಗಳಿಗೆ ಹತ್ಯೆಗೆ ಬಳಸಿದ್ದ ಪಿಸ್ತೂಲು ಹಾಗೂ ಬೈಕ್ ಬಗ್ಗೆ ಮಾಹಿತಿ ಇದೆ. ಹೀಗಾಗಿ, ಅವರನ್ನು ಗೋವಾ, ಮಹಾರಾಷ್ಟ್ರ, ಮಂಗಳೂರು, ಬೆಳಗಾವಿ ಸೇರಿದಂತೆ ಹಲವು ಕಡೆ ಕರೆದುಕೊಂಡು ಹೋಗಿ ಪಂಚನಾಮೆ ನಡೆಸಬೇಕಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಆ.6 ವರೆಗೆ ಪೊಲೀಸ್ ವಶಕ್ಕೆ ನೀಡಲು ಆದೇಶಿಸಿತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News