ಶಾಸಕರ ಭವನದಲ್ಲಿ ಸಮಸ್ಯೆಗಳ ಮಹಾಪೂರ: ಬಸವರಾಜ ಹೊರಟ್ಟಿ

Update: 2018-07-23 15:53 GMT

ಬೆಂಗಳೂರು, ಜು.23: ಶಾಸಕರ ಭವನದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ಸಂಬಂಧ ಸ್ಪೀಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್ತಿನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಭವನದಲ್ಲಿರುವ ಅವ್ಯವಸ್ಥೆಗಳ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು ಎಂದರು.

ಶಾಸಕರು ಹಾಗೂ ಅವರನ್ನು ಭೇಟಿ ಮಾಡಲು ಜನಸಾಮಾನ್ಯರಿಗೆ ಶಾಸಕರ ಭವನದಲ್ಲಿ ಹಲವಾರು ಅನಾನುಕೂಲತೆಗಳು ಎದುರಾಗುತ್ತಿರುವುದು, ನಿಯಮ ಬಾಹಿರವಾಗಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವುದು, ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಸೇರಿದಂತೆ ಇನ್ನಿತರ ವಿಷಯಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಅವರು ಹೇಳಿದರು.

ಶಾಸಕರ ಭವನದ ಆವರಣದಲ್ಲಿ 50 ಕೋಟಿ ರೂ.ಖರ್ಚು ಮಾಡಿ, ಐದು ಅಂತಸ್ತುಗಳ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಆದರೆ, ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗಿಲ್ಲ. ಎಲ್ಲಿ ನೋಡಿದರೂ ನೀರು ನಿಂತಿರುತ್ತದೆ, ಶುಚಿತ್ವವನ್ನು ಕಾಪಾಡಿಲ್ಲ. ಅಲ್ಲದೆ, ಐದು ಅಂತಸ್ತುಗಳಲ್ಲಿ ಒಂದು ಕಡೆಯೂ ಸಾರ್ವಜನಿಕರ ಬಳಕೆಗಾಗಿ ಶೌಚಾಲಯವನ್ನು ನಿರ್ಮಿಸಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಶಾಸಕರ ಆರೋಗ್ಯ ತಪಾಸಣೆಗಾಗಿ ಒಂದು ಕೊಠಡಿ ಇದೆ. ಹೋಮಿಯೋಪತಿ, ಯುನಾನಿ ಸೇರಿದಂತೆ ಎಲ್ಲ ಆರೋಗ್ಯ ಸೇವೆಯನ್ನು ಅಲ್ಲಿ ಕಲ್ಪಿಸಲಾಗುತ್ತದೆ. ಆದರೆ, ಅಲ್ಲಿ ಕಾಲಿಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ. ಆರೋಗ್ಯ ತಪಾಸಣಾ ಕೊಠಡಿಯನ್ನು ತಕ್ಷಣವೆ ಶುಚಿಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನಿಯಮಾವಳಿಗಳ ಪ್ರಕಾರ ನಂದಿನಿ ಪಾರ್ಲರ್‌ನಲ್ಲಿ ನಂದಿ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ, ಆ ಅಂಗಡಿಯೂ ಸ್ಟೇಷನರಿ ಮಾದರಿಯಲ್ಲಿದೆ. ಶಾಸಕರ ಭವನವು ಮಾರುಕಟ್ಟೆ ರೀತಿಯಲ್ಲಿ ಆಗಿದೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯ ಸ್ಪೀಕರ್ ಅವರು ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯ ನಂತರ ಹೊರಗಿನವರಿಗೆ ಶಾಸಕರ ಭವನ ಆವರಣ ಪ್ರವೇಶಕ್ಕೆ ಅವಕಾಶ ನಿಷೇಧಿಸಿರುವ ಕ್ರಮ ಸರಿಯಾಗಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಎಸ್.ಮೂರ್ತಿ ಕ್ಷಮೆಯಾಚನೆ: ವಿಧಾನಪರಿಷತ್ತಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಆರೋಪ ಮಾಡಿದ್ದ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಮ್ಮನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಪುನರಾವರ್ತನೆಯಾಗದಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News