ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮೂಲದ ಮಹಿಳೆ: ವಾಪಸ್ ಕರೆತರಲು ಕುಮಾರಸ್ವಾಮಿ ಸೂಚನೆ

Update: 2018-07-23 15:58 GMT

ಬೆಂಗಳೂರು, ಜು. 23: ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪತಿಯಿಂದ ಪರಿತ್ಯಕ್ತಳಾಗಿದ್ದ ಈ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿ ತನ್ನ ಅರಿವಿಗೆ ಬಾರದಂತೆ ಹಿಮಾಚಲ ಪ್ರದೇಶ ಸೇರಿದ್ದಳು. ಶಿಮ್ಲಾದ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಮುಖ್ಯಮಂತ್ರಿಯವರು ಇತ್ತೀಚೆಗೆ ಹೊಸದಿಲ್ಲಿ ಭೇಟಿ ನೀಡಿದ್ದಾಗ ಪತ್ರಕರ್ತರೊಬ್ಬರು ಈ ಮಹಿಳೆಯ ಕುರಿತು ಮಾಹಿತಿ ನೀಡಿ ಅವರು ಊರಿಗೆ ಹಿಂತಿರುಗಲು ನೆರವಾಗುವಂತೆ ಮನವಿ ಮಾಡಿದ್ದರು.

ಮುಖ್ಯಮಂತ್ರಿಯವರು ಇಂದು ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸಲು ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳು ಆ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಹಿಮಾಚಲ ಪ್ರದೇಶದ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಚಿಕಿತ್ಸೆಯ ನಂತರ ಆಕೆಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಈ ಮಹಿಳೆ ಪತಿಯಿಂದ ಪರಿತ್ಯಕ್ತಳಾಗಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾದ ಬೀದಿಯಲ್ಲಿ ಪತ್ತೆಯಾಗಿದ್ದರು.

ಅವರನ್ನು ಕಾಂಗ್ರಾದ ಡಾ.ರಾಜೇಂದ್ರಪ್ರಸಾದ್ ಸರಕಾರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ದಾಖಲಿಸಲಾಗಿತ್ತು. ನಂತರ ಜೂನ್ 2016ರಲ್ಲಿ ಹಿಮಾಚಲ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿತ್ತು. ಭಾಷೆಯ ಸಮಸ್ಯೆಯಿಂದಾಗಿ ಊರವರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಆಗಿರಲಿಲ್ಲ.

ಅಲ್ಲದೆ, ಆಘಾತಗೊಂಡಿದ್ದರಿಂದ ಅವರು ಅಲ್ಲಿ ಹೇಗೆ ತಲುಪಿದರು ಎಂಬುದನ್ನು ಅವರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಈ ವಿಷಯ ಸಿಎಂ ಗಮನಕ್ಕೆ ಬಂದ ಕೂಡಲೇ ಆ ಮಹಿಳೆಯ ರಕ್ಷಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News