ಬೆಂಗಳೂರು: ಬೈಕ್ ಅಪಘಾತ; ಸಾಫ್ಟ್‌ವೇರ್ ಇಂಜಿನಿಯರ್ ಮೃತ್ಯು
ಬೆಂಗಳೂರು, ಜು.23: ಮದ್ಯದ ಅಮಲಿನಲ್ಲಿ ಬೈಕ್ ಚಾಲನೆ ಮಾಡಿ, ರಸ್ತೆ ಪಕ್ಕದ ತಡೆಗೋಡೆ ಪೈಪ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಜೀವನ್ ಭೀಮಾನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಚಲ್ಲಘಟ್ಟದ ಪ್ರದೀಪ್(30) ಘಟನೆಯಲ್ಲಿ ಮೃತಪಟ್ಟರೆ ಈತನ ಸ್ನೇಹಿತ ಸುಮಂತ್(33) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರ ಮೂಲದ ಇವರಿಬ್ಬರೂ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದ ಅಂಗವಾಗಿ ಇವರಿಬ್ಬರೂ ಪಾರ್ಟಿಗೆ ಹೋಗಿ ಪಾನಮತ್ತರಾಗಿ ರಾತ್ರಿ 1:30ರ ವೇಳೆ ಮನೆಗೆ ಬೈಕ್‌ನಲ್ಲಿ ಇಬ್ಬರೂ ಹೆಲ್ಮೆಟ್ ಹಾಕದೇ ವೇಗವಾಗಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಚಲ್ಲಘಟ್ಟ ಮುಖ್ಯರಸ್ತೆಯಲ್ಲಿ ಬೈಕ್ ಆಯತಪ್ಪಿ ತಡೆಗೋಡೆ ಪೈಪ್‌ಗೆ ಢಿಕ್ಕಿಯಾಗಿ ಕೆಳಗೆ ಬಿದ್ದಿದ್ದು, ಇಬ್ಬರಲ್ಲಿ ಪ್ರದೀಪ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರೆ ಸುಮಂತ್ ಗಾಯಗೊಂಡಿದ್ದಾನೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.