ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಚಿಂತನೆ
ಬೆಂಗಳೂರು, ಜು.23: ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ನಗರದಲ್ಲಿ ಸ್ಥಾಪಿಸಲು ಇಂಧನ ಇಲಾಖೆ ನಿರ್ಧರಿಸಿದೆ. ಈಗಾಗಲೇ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಅದಕ್ಕೆ ನಿಧಾನಗತಿಯ ಪ್ರತಿಕ್ರಿಯೆ ಬರುತ್ತಿರುವುದನ್ನು ಗಮನಿಸಿದ ಇಲಾಖೆ ಈ ಕೇಂದ್ರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.
ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸೀಮಿತ ಮೂಲ ಸೌಲಭ್ಯ ನೀಡುವ ಕೇಂದ್ರದ ಯೋಜನೆಗೆ ಬೆಸ್ಕಾಂ ಸಮ್ಮತಿಸಿದೆ. ಮೇ ಎರಡನೇ ವಾರದಲ್ಲಿ ಇಂಧನ ಇಲಾಖೆಯಿಂದ ಈ ಪ್ರಸ್ತಾವ ಬಂದಿದೆ. ಪ್ರತಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ರೂ.25 ಲಕ್ಷ ವೆಚ್ಚವಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 83 ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಪ್ರತಿಕೇಂದ್ರಕ್ಕೆ 5 ಲಕ್ಷ ರೂ.ಗಳು ವೆಚ್ಚ ಮಾಡಲಾಗುತ್ತಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 20 ಕೇಂದ್ರಗಳು, ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ 10 ಕೇಂದ್ರಗಳು ಇರಲಿವೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಸ್ಕಾಂ ವತಿಯಿಂದ ಮಂಡ್ಯದವರೆಗೆ ಮಾತ್ರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಮುಂದಿನ ಕೇಂದ್ರಗಳನ್ನು ಕೋಲ್ಕತ್ತಾ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಷನ್‌ಗೆ ವಹಿಸಲಾಗಿದೆ. ಚೆನ್ನೈ ಹೆದ್ದಾರಿಯಲ್ಲಿ ಕರ್ನಾಟಕದ ಗಡಿಯವರೆಗೆ ಚಾರ್ಜಿಂಗ್ ಕೇಂದ್ರಗಳನ್ನು ಬೆಸ್ಕಾಂ ಸ್ಥಾಪಿಸಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಚಾರ್ಜಿಂಗ್ ಕೇಂದ್ರಗಳಲ್ಲಿ ಪೂರೈಸುವ ವಿದ್ಯುತ್ ಪ್ರತಿ ಯೂನಿಟ್‌ಗೆ ರೂ. 4.50 ದರ ನಿಗದಿಪಡಿಸಿದೆ. ಅಲ್ಲದೇ ಕೇಂದ್ರ ಸ್ಥಾಪನೆಗೆ ಯಾವುದೇ ಲೈಸೆನ್ಸ್ ಬೇಡ ಎಂದು ಹೇಳಲಾಗಿದೆ.
ಪ್ರತಿ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಪಾಯಿಂಟ್‌ನಲ್ಲಿ 50 ಕಿಲೋವ್ಯಾಟ್‌ನ ಫಾಸ್ಟ್ ಚಾರ್ಜಿಂಗ್ ಪಾಯಿಂಟ್, 22 ಕಿಲೋವ್ಯಾಟ್‌ನ 2 ಚಾರ್ಜಿಂಗ್ ಪಾಯಿಂಟ್, ಒಂದು ಎಸಿ ಮತ್ತು ಡಿಸಿ ಪಾಯಿಂಟ್‌ಗಳು ಇರಲಿವೆ. ಒಟ್ಟಾರೆ 83 ಎಲೆಕ್ಟ್ರಿಕ್ ಚಾರ್ಚಿಂಗ್ ಕೇಂದ್ರಗಳಿಗೆ 20 ಕೋಟಿ ರೂ.ಗಳು ವೆಚ್ಚ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ಡಿಪಿಆರ್ ಸಿದ್ಧವಾಗುತ್ತಿದೆ ಎಂದು ತಿಳಿದುಬಂದಿದೆ.
ಒಂದು ಎಲೆಕ್ಟ್ರಿಕ್ ವಾಹನ ಚಾರ್ಜ್ ಆಗಬೇಕು ಅಂದ್ರೆ ಕನಿಷ್ಠ 90 ನಿಮಿಷಗಳು ಬೇಕು. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಮಾಡೋದಕ್ಕೆ ಸಮಯ ಹೆಚ್ಚು ಬೇಕಾಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚು ಜನ ಇದನ್ನು ಬಳಸ್ತಿಲ್ಲ ಅನ್ನೋ ಮಾಹಿತಿ ಕೂಡ ಇದೆ. ಇ ವಾಹನ ಪ್ರಮೋಟ್ ಮಾಡ್ಬೇಕು ಅಂದ್ರೆ ಚಾರ್ಜಿಂಗ್ ಟೈಮ್ ಕಡಿಮೆ ಮಾಡೋ ಪ್ರಯತ್ನ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.