ನಿಮ್ಮ ಬಳಿ ಹರಿದ,ಹಾಳಾದ ನೋಟುಗಳಿವೆಯೇ?: ಅವುಗಳನ್ನು ಹೀಗೆ ಸದುಪಯೋಗಪಡಿಸಿಕೊಳ್ಳಿ

Update: 2018-07-24 12:52 GMT

ಎಷ್ಟೋ ಬಾರಿ ಹರಿದ ನೋಟುಗಳು ನಮಗೆ ಗೊತ್ತಿಲ್ಲದೆ ನಮ್ಮ ಕೈಸೇರುತ್ತವೆ. 10-20 ರೂ.ನಂತಹ ಕಡಿಮೆ ಮುಖಬೆಲೆಯ ಒಂದೆರಡು ನೋಟುಗಳಿದ್ದರೆ ಕೆಲವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವುಗಳನ್ನು ಬದಲಿಸಿಕೊಳ್ಳುವುದೂ ಅವರಿಗೆ ಉದಾಸೀನವಾಗಿರುತ್ತದೆ. ಹೆಚ್ಚಿನವರಿಗೆ ಹಳೆಯ,ಹರಿದ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಳ್ಳುವುದು ಗೊತ್ತಿರುವುದಿಲ್ಲ. ಹೀಗಾಗಿ ಅಂತಹ ನೋಟುಗಳು ಕ್ರಮೇಣ ಮೂಲೆ ಸೇರಿಕೊಳ್ಳುತ್ತವೆ.

ನಿಮ್ಮ ಬಳಿ ಹರಿದ,ಹಾಳಾದ ನೋಟುಗಳಿದ್ದರೆ ಮತ್ತು ಅವುಗಳನ್ನು ಏನು ಮಾಡಬೇಕು ಎನ್ನುವುದು ಗೊತ್ತಿಲ್ಲದಿದ್ದರೆ ಹತಾಶರಾಗಬೇಕಿಲ್ಲ. ಅವುಗಳನ್ನು ಒಳ್ಳೆಯ ನೋಟುಗಳಿಗೆ ಬದಲಿಸಿಕೊಳ್ಳಬಹುದು. ಈ ಬಗ್ಗೆ ನಿಮಗೆ ಅಗತ್ಯವಿರುವ ಮಾಹಿತಿಗಳಿಲ್ಲಿವೆ.......

ಯಾವುದೇ ಬ್ಯಾಂಕಿನಲ್ಲಿ ವಿನಿಮಯಿಸಿಕೊಳ್ಳಿ

ಭಾರತೀಯ ರಿಝರ್ವ್ ಬ್ಯಾಂಕಿನ ನಿರ್ದೇಶದಂತೆ ಪ್ರತಿಯೊಂದು ಬ್ಯಾಂಕ್ ಹರಿದ,ತುಂಬ ಕೊಳೆಯಾಗಿರುವ ಮತ್ತು ದೋಷಯುಕ್ತ ನೋಟುಗಳನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ. ಹೀಗಾಗಿ ನಿಮ್ಮ ಬಳಿ ಇಂತಹ ನೋಟುಗಳಿದ್ದರೆ ನಿಮಗೆ ಸಮೀಪದಲ್ಲಿರುವ ಬ್ಯಾಂಕಿಗೆ ತೆರಳಿ ಅವುಗಳನ್ನು ಬದಲಿ ನೋಟುಗಳಿಗೆ ವಿನಿಮಯಿಸಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ನೀವು ಬ್ಯಾಂಕಿನ ಗ್ರಾಹಕರಾಗಿರಲಿ ಅಥವಾ ಗ್ರಾಹಕರಲ್ಲದಿರಲಿ, ದೇಶಾದ್ಯಂತ ಯಾವುದೇ ಬ್ಯಾಂಕಿನಲ್ಲಿ ಹಾಳಾದ ನೋಟುಗಳನ್ನು ಬದಲಿಸಿಕೊಳ್ಳಬಹುದು.

ನಿಮ್ಮ ಬಿಲ್‌ಗಳನ್ನು ಪಾವತಿಸಿ

ಹೆಚ್ಚಿನ ಜನರಿಗೆ ಇದು ಗೊತ್ತಿರಲಿಕ್ಕಿಲ್ಲ. ನೀವು ನಿಮ್ಮ ಬಳಿಯಿರುವ ಹರಿದ,ಹಾಳಾದ ನೋಟುಗಳ ಮೂಲಕ ಬ್ಯಾಂಕುಗಳಲ್ಲಿ ನಿಮ್ಮ ಬಿಲ್‌ಗಳು ಮತ್ತು ತೆರಿಗೆಯನ್ನು ಕಟ್ಟಬಹುದು.

ಖಾತೆಗೆ ಜಮಾ ಮಾಡಿ

ಚಲಾವಣೆ ಮಾಡಲು ಸಾಧ್ಯವಿಲ್ಲದ ಹಾಳಾದ ನೋಟುಗಳನ್ನು ನೀವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.

ನಾನ್-ಕರೆನ್ಸಿ ಚೆಸ್ಟ್ ಬ್ಯಾಂಕ್ ಆಗಿದ್ದರೆ 30 ದಿನಗಳ ಗಡುವು

ನಿಮ್ಮ ಬಳಿ ಐದರವರೆಗೆ ಹಾಳಾದ ನೋಟುಗಳಿದ್ದರೆ ಮತ್ತು ಕರೆನ್ಸಿ ಚೆಸ್ಟ್ ಅಲ್ಲದ ನಿಮ್ಮ ಬ್ಯಾಂಕು ಅವುಗಳನ್ನು ವಿನಿಮಯಿಸಲು ಸಾಧ್ಯವಿಲ್ಲದಿದ್ದರೂ ನೀವು ಆ ನೋಟುಗಳನ್ನು ಅಲ್ಲಿ ಜಮಾ ಮಾಡಿ ರಸೀದಿಯನ್ನು ಪಡೆದುಕೊಳ್ಳಬಹುದು. ಇಂತಹ ಪ್ರಕರಣಗಳಲ್ಲಿ 30 ದಿನಗಳಲ್ಲಿ ನಿಮಗೆ ಬದಲಿ ನೋಟುಗಳು ದೊರೆಯುತ್ತವೆ.

ವಿನಿಮಯ ಸಾಧ್ಯವಿಲ್ಲದ ನೋಟುಗಳು

ನಿಮ್ಮ ಬಳಿಯಿರುವ ಹಾಳಾದ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸದಿರುವ ಸಂದರ್ಭಗಳೂ ಇವೆ. ಆರ್‌ಬಿಐ ನಿರ್ದೇಶದಂತೆ ತುಂಬ ಚೂರುಚೂರಾದ, ತೀವ್ರವಾಗಿ ಸುಟ್ಟಿರುವ ಅಥವಾ ಪ್ರತ್ಯೇಕಿಸಲಾಗದಂತೆ ಒಂದಕ್ಕೊಂದು ಅಂಟಿಕೊಂಡಿರುವ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸುವಂತಿಲ್ಲ. ಇಂತಹ ನೋಟುಗಳನ್ನು ಇಷ್ಯೂ ಆಫೀಸ್‌ನಲ್ಲಿಯೇ ಜಮಾ ಮಾಡಬೇಕು. ಅಲ್ಲದೆ ಘೋಷಣೆಗಳು ಅಥವಾ ರಾಜಕೀಯ ಸಂದೇಶಗಳನ್ನು ಹೊಂದಿರುವ ನೋಟುಗಳು ಕಾನೂನಿನ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ ಮತ್ತು ಅವುಗಳನ್ನು ಬ್ಯಾಂಕುಗಳಲ್ಲಿ ವಿನಿಮಯಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಉದ್ದೇಶಪೂರ್ವಕವಾಗಿ ನೋಟನ್ನು ಹರಿದಿದ್ದೀರಿ ಅಥವಾ ಕತ್ತರಿಸಿದ್ದೀರಿ ಎಂದು ಬ್ಯಾಂಕ್ ಅಧಿಕಾರಿ ಶಂಕಿಸಿದರೂ ಅದನ್ನು ವಿನಿಮಯಿಸಲು ಅಥವಾ ಜಮಾ ಮಾಡಿಕೊಳ್ಳಲು ಅವರು ನಿರಾಕರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News