ರಾಷ್ಟ್ರೀಕೃತ ಬ್ಯಾಂಕುಗಳ ಸಾಲವೂ ಸೇರಿ ಅಂದಾಜು 48 ಸಾವಿರ ಕೋಟಿ ಸಾಲ ಮನ್ನಾ: ಕುಮಾರಸ್ವಾಮಿ

Update: 2018-07-24 16:42 GMT

ಬೆಂಗಳೂರು, ಜು. 24: ರೈತರ ಬೆಳೆ ಸಾಲ ಮನ್ನಾ ಯೋಜನೆ ಕುರಿತು ಸರಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಭೆ ಇಂದು ನಡೆದಿದ್ದು, ಸರಕಾರವು ಸಹಕಾರಿ ವಲಯದ ಸಾಲ, ಪ್ರೋತ್ಸಾಹಧನ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ ಸೇರಿ ಒಟ್ಟು ಸುಮಾರು 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಲ ಮನ್ನಾ ಕುರಿತು ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ, ಸಾಲಮನ್ನಾ ಯೋಜನೆಯನ್ನು ಸುಲಲಿತವಾಗಿ ಅನುಷ್ಠಾನಗೊಳಿಸಲು ಹಾಗೂ ರೈತರಿಗೆ ಹೊಸ ಬೆಳೆ ಸಾಲ ನೀಡಲು ಅನುಕೂಲ ಕಲ್ಪಿಸುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಕುರಿತು ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ದು, ತಮ್ಮ ಕೇಂದ್ರ ಕಚೇರಿ ಅಧಿಕಾರಿಗಳ ಜೊತೆ ಚರ್ಚಿಸಿ, ನಿರ್ದೇಶಕ ಮಂಡಳಿ ಅನುಮೋದನೆ ಪಡೆಯುವುದಾಗಿ ತಿಳಿಸಿದ್ದಾರೆ. ಬ್ಯಾಂಕುಗಳು ಅರ್ಹ ಸಾಲಗಳ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಡಿಜಿಟಲ್ ಸಹಿಯೊಂದಿಗೆ ಸರಕಾರಕ್ಕೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸಾಲ ಮನ್ನಾ ಮಾಡಲು ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. 37,159 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ, 9448 ಕೋಟಿ ರೂ. ಹೊಸಚಾಲ್ತಿ ಸಾಲ ಎಲ್ಲ ಸೇರಿ ಸುಮಾರು 48 ಸಾವಿರ ಕೋಟಿರೂ. ಗಳಷ್ಟಾಗುತ್ತವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಹಿಂದಿನ ಸರಕಾರದ ಅವಧಿಯಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಕುರಿತ ಅನುದಾನವನ್ನು ಆರ್ಥಿಕ ಇಲಾಖೆ ಈಗಾಗಲೇ ಬಿಡುಗಡೆ ಮಾಡಿದೆ.
ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಆತಂಕ ಪಡಬೇಕಾಗಿಲ್ಲ. ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್, ಸಹಕಾರ ಸಚಿವ ಬಂಡೆಪ್ಪಾ ಕಾಶೆಂಪೂರ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News