ಸಿಬ್ಬಂದಿಯೊಬ್ಬರ ಭಡ್ತಿ ವಿಚಾರ: ಆದೇಶ ಪಾಲಿಸದ ಬಿಬಿಎಂಪಿ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2018-07-24 16:53 GMT

ಬೆಂಗಳೂರು, ಜು.24: ಸಿಬ್ಬಂದಿಯೊಬ್ಬರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಕಳೆದರೂ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂಬ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಆಡಳಿತ ವಿಭಾಗದ ಡೆಪ್ಯುಟಿ ಕಮಿಷನರ್ ಜಿ.ಸಿ.ವೃಷಬೇಂದ್ರ ಮೂರ್ತಿ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಬಿಬಿಎಂಪಿ ಸಿಬ್ಬಂದಿ ವಿ.ಶ್ರೀಧರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಖುದ್ದು ಹಾಜರಿದ್ದ ಇಬ್ಬರೂ ಅಧಿಕಾರಿಗಳಿಗೆ, ಭಡ್ತಿಯಂತಹ ಒಂದು ಸಣ್ಣ ಆದೇಶ ಪಾಲನೆಗೆ ಮೂರು ವರ್ಷ ಕಾಯಬೇಕೆ, ನಿಮ್ಮ ಉಡಾಫೆ ಮತ್ತು ನಿರ್ಲಕ್ಷದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿತು.

ಆಗಸ್ಟ್ 2ರೊಳಗೆ ಪ್ರಮಾಣಪತ್ರ ಸಲ್ಲಿಸಿ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಅರ್ಜಿದಾರರು ಈ ಮುನ್ನ ಮಹದೇವಪುರ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದರು. 2006ರಲ್ಲಿ ಬಿಬಿಎಂಪಿ ರಚನೆಯಾದ ನಂತರ ಪಾಲಿಕೆ ಸಿಬ್ಬಂದಿಯಾದರು. ಇವರಿಗೆ ಭಡ್ತಿ ನೀಡುವಂತೆ 2015ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News