ಭಾರತದ ಐವರು ಆಟಗಾರರು ದ್ವಿತಿಯ ಸುತ್ತಿಗೆ

Update: 2018-07-24 18:40 GMT

ವ್ಲಾಡಿವೊಸ್ಟೋಕ್, ಜು.24: ಇಲ್ಲಿ ಆರಂಭಗೊಂಡ ರಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಅಜಯ್ ಜಯರಾಮ್ ಸೇರಿದಂತೆ ಐವರು ಆಟಗಾರರು ಎರಡನೇ ಸುತ್ತು ಪ್ರವೇಶಿಸಿದರು.

75,000 ಯುಎಸ್ ಡಾಲರ್ ಬಹುಮಾನ ಮೊತ್ತದ ರಶ್ಯ ಓಪನ್ ಬಿಡಬ್ಲುಎಫ್ ಟೂರ್ ಸೂಪರ್ 100 ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲ್ಲಿ ಅಜಯ್ ಜಯರಾಮ್ ಅವರು ಕೆನಡಾದ ಕ್ಸಿಯಾಡಾಂಗ್ ಶೆಂಗ್ ಅವರನ್ನು 21-14, 21-8 ಅಂತರದಲ್ಲಿ ಮಣಿಸಿ ಎರಡನೇ ಸುತ್ತು ತಲುಪಿದರು.

ಎರಡನೇ ಸುತ್ತಿನಲ್ಲಿ ಶುಭಾಂಕರ್ ಡೇ ಅವರನ್ನು ಅಜಯ್ ಜಯರಾಮ್ ಎದುರಿಸಲಿರುವರು.

ಜಯರಾಮ್ ಇತ್ತೀಚೆಗೆ ವೈಟ್ ನೈಟ್ಸ್ ಅಂತರ್‌ರಾಷ್ಟ್ರೀಯ ಚಾಲೆಂಜ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ರಶ್ಯ ಓಪನ್ ಎರಡನೇ ಸುತ್ತಿನಲ್ಲಿ ಜಯರಾಮ್‌ರನ್ನು ಎದುರಿಸಲಿರುವ ಶುಭಾಂಕರ್ ಡೇ ಎರಡನೇ ಸುತ್ತಿಗೆ ಬೈ ಮೂಲಕ ತೇರ್ಗಡೆಯಾದರು.

ಪ್ರತುಲ್ ಜೋಶಿ ಕೆನಡಾದ ಜೆಪ್ರೀ ಲ್ಯಾಮ್‌ರನ್ನು ಮೊದಲ ಸುತ್ತಿನಲ್ಲಿ 21-11, 21-8 ಅಂತರದಲ್ಲಿ ಮಣಿಸಿದರು. ಬುಧವಾರ ಸ್ಪೋರ್ಟ್ಸ್‌ಹಾಲ್ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಸುತ್ತಿನ ಪಂದ್ಯದಲ್ಲಿ ಜೋಶಿ ಅವರಿಗೆ ಇಸ್ರೇಲ್‌ನ ಮಿಶಾ ಝಿಲ್ಬೆರ್‌ಮನ್ ಸವಾಲು ಎದುರಾಗಲಿದೆ.

ಬೆಲ್ಜಿಯಂನ ಎಲಿಯಾಸ್ ಬ್ರಾಕೇ ವಿರುದ್ಧ ಮಿಥುನ್ ಮಂಜುನಾಥ್ 21-14, 21-13 ಅಂತರದಲ್ಲಿ ಜಯ ಗಳಿಸಿದರು. ಮಲೇಶ್ಯಾದ ಜಿಯಾ ವೇಯ್ ತಾನ್ ವಿರುದ್ಧ ಸಿದ್ಧಾರ್ಥ ಪ್ರತಾಪ್ ಸಿಂಗ್ 21-17, 21-16 ಅಂತರದಲ್ಲಿ ಜಯ ಸಾಧಿಸಿದರು. ಇದೇ ವೇಳೆ ರಾಹುಲ್ ಯಾದವ್ ಚಿಟ್ಟಾಬೊನಿಯಾ ಅವರು ರಶ್ಯದ ಮ್ಯಾಕ್‌ಸಿಮ್ ಮಾಕ್ಲಾವ್ ವಿರುದ್ಧ 21-11,21-10 ಅಂತರದಲ್ಲಿ ಜಯ ಗಳಿಸಿ ಎರಡನೇ ಸುತ್ತು ತಲುಪಿದರು.

    

ಮುಂದಿನ ಸುತ್ತಿನಲ್ಲಿ ಸಿದ್ದಾರ್ಥ ಅವರಿಗೆ ಬೋಧಿತ್ ಜೋಶಿ, ರಾಹುಲ್‌ಗೆ ಸೌರಭ್ ವರ್ಮಾ ಸವಾಲು ಎದುರಾಗಲಿದೆ. ಪಿ.ಕಶ್ಯಪ್ ಮತ್ತು ಆರ್‌ಎಂವಿ ಗುರುಸಾಯಿದತ್ ಎರಡನೇ ಸುತ್ತಿಗೆ ಬೈ ಪಡೆದರು. ಕಶ್ಯಪ್ ಎರಡನೇ ಸುತ್ತಿನಲ್ಲಿ ಜಪಾನ್‌ನ ರಿಯೊಟಾರೊ ಮವ್ರೊರನ್ನು ಮತ್ತು ಗುರುಸಾಯಿದತ್ ಅವರು ರಶ್ಯದ ವ್ಲಾಡಿಮಿರ್ ಮಲ್ಕಾವೊರನ್ನು ಎದುರಿಸಲಿರುವರು.

 ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಚಿರಾಗ್ ಸೇನ್ ಅವರಿಗೆ ಸ್ಪೇನ್‌ನ ಅಗ್ರ ಶ್ರೇಯಾಂಕದ ಪಾಬೊ ಅಬಿಯನ್ ಸವಾಲು ಎದುರಾಗಿದೆ.ಬುಧವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಪಂದ್ಯಗಳಲ್ಲಿ ವೈದೇಹಿ ಚೌಧರಿ , ಸಾಯ್ ಉತ್ತೇಜಿತಾ ರಾವ್ ಚುಕ್ಕಾ , ವೃಶಾಲಿ ಗುಮ್ಮಾಡಿ, ಮುಗ್ಧಾ ಅಗ್ರೇ ಮತ್ತು ಋತುಪರ್ಣ ದಾಸ್ ಆಡಲಿರುವರು.ಪುರುಷರ ಡಬಲ್ಸ್‌ನಲ್ಲಿ ಅರುಣ್ ಜಾರ್ಜ್ ಮತ್ತು ಸನ್ಯಂ ಶುಕ್ಲ ಅವರು ರಶ್ಯದ ವ್ಲಾಡಿಮಿರ್ ನಿಕುಲಾವ್ ಮತ್ತು ಅರ್ಟೆಮ್ ಸೆರ್ಪಿಯೊನೊವ್‌ರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News