​ಪಾಕಿಸ್ತಾನ: ಅಭೂತಪೂರ್ವ ಭದ್ರತೆ ಮಧ್ಯೆ ಮತದಾನ ಆರಂಭ

Update: 2018-07-25 03:25 GMT

ಇಸ್ಲಾಮಾಬಾದ್, ಜು. 25: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಅಭೂತಪೂರ್ವ ಭದ್ರತೆ ನಡುವೆ ಮತದಾನ ಆರಂಭವಾಗಿದೆ. ಚುನಾವಣೆ ಪ್ರಚಾರ ಸಂದರ್ಭದಲ್ಲೇ ಉಗ್ರರ ಉಪಟಳ ಮತ್ತು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಕಳೆದ ಚುನಾವಣೆಯಲ್ಲಿ 342 ಸ್ಥಾನಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್ ನೇತೃತ್ವದ ಪಿಎಂಎಲ್-ಎನ್ 166 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷ ಎನಿಸಿಕೊಂಡಿತ್ತು. ಈ ಬಾರಿ ಒಟ್ಟು ಚಲಾಯಿತ ಮತಗಳ ಪೈಕಿ ಶೇಕಡ 10ರಷ್ಟು ಮಹಿಳೆಯರು ಮತ ಚಲಾಯಿಸದಿದ್ದ ಕ್ಷೇತ್ರಗಳ ಚುನಾವಣೆಯನ್ನು ರದ್ದುಪಡಿಸಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ದೇಶಾದ್ಯಂತ 85307 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 12 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯ 272 ಸ್ಥಾನ ಹಾಗೂ ನಾಲ್ಕು ಪ್ರಾಂತೀಯ ಅಸೆಂಬ್ಲಿಗಳ 577 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ದೇಶಾದ್ಯಂತ ಸುಮಾರು 3.7 ಲಕ್ಷ ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೇಶದ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಚುನಾವಣೆಗೆ ನಿಯೋಜಿಸಿರುವುದು ಇದೇ ಮೊದಲು.

ಪಾಕಿಸ್ತಾನ ಮುಸ್ಲಿಂ ಲೀಗ್- ನವಾಝ್ (ಪಿಎಂಎಲ್-ಎನ್), ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫಾ (ಪಿಟಿಐ) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕೆಲ ಕ್ಷೇತ್ರಗಳಲ್ಲಿ ಸಣ್ಣ ಪಕ್ಷಗಳು ಕೂಡಾ ಪೈಪೋಟಿ ನೀಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News