ಸ್ರೆಬ್ರೆನಿಕಾ ಹತ್ಯಾಕಾಂಡದ ಬೆಂಕಿಯಲ್ಲಿ ಅರಳಿದ ಹೂ ಹತೀಝಾ ಮಹ್ಮದೊವಿಕ್

Update: 2018-07-25 07:35 GMT

ಬೋಸ್ನಿಯಾ ಯುದ್ಧದಲ್ಲಿ ಬದುಕುಳಿದು ಸ್ರೆಬ್ರೆನಿಕಾ (ಹತ್ಯಾಕಾಂಡದ ಸಂತ್ರಸ್ತರ) ತಾಯಂದಿರ ಸಂಘದ ನೇತೃತ್ವ ವಹಿಸಿದ್ದ ಹತೀಝಾ ಮಹ್ಮದೊವಿಕ್ ಸರಜೆವೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಇದೀಗ ಬಂದಿದೆ.

ಬೋಸ್ನಿಯಾ ಸಾಮೂಹಿಕ ಹತ್ಯಾಕಾಂಡದ ಸಂತ್ರಸ್ತರನ್ನು ಹೂತ ಸ್ಥಳವಾದ ಸ್ರೆಬ್ರೆನಿಕಾ ಸ್ಮಾರಕ ವಿಕ್ಷಿಸಲು ತೆರಳಿದ ಸಂದರ್ಭದಲ್ಲಿ ನಾನು ಹತೀಝಾ 
ಅವರನ್ನು ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಈ ಹತ್ಯಾಕಾಂಡ, ಯಹೂದಿ ನರಮೇಧದ ಬಳಿಕ ಯುರೋಪಿಯನ್ ಇತಿಹಾಸ ಕಂಡ ಅತಿದೊಡ್ಡ ಹತ್ಯಾಕಾಂಡ. ಸ್ರೆಬ್ರೆನಿಕಾದಲ್ಲಿ ತಬ್ಬಲಿಯಾದ ಮತ್ತು ವಿಧವೆಯರಾದ ತಾಯಂದಿರ ಮಧ್ಯೆ ಕುಳಿತು, ತಾಳ್ಮೆಯಿಂದ ಗೌರವಯುತವಾಗಿ ಹತೀಝಾ ತಮ್ಮ ಕಥೆಯನ್ನು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ.

ಯುದ್ಧಕ್ಕೆ ಮುನ್ನ ಜೀವನದ ಚಿತ್ರಣವನ್ನು ಅವರು ಮನೋಜ್ಞವಾಗಿ ಬಿಂಬಿಸಿದ್ದರು. ಪತಿ ಅಬ್ದುಲ್ಲಾ ಮತ್ತು ಇಬ್ಬರು ಮಕ್ಕಳಾದ ಅಜ್ಮೀರ್ (21) ಮತ್ತು ಅಲ್ಮೀರ್ (18) ಅವರೊಂದಿಗೆ ಸುಖಸಂಸಾರ ನಡೆಸುತ್ತಿದ್ದರು. 1995ರ ಜುಲೈ ತಿಂಗಳ ಕರಾಳ ದಿನಗಳನ್ನು ಅವರು ಬಣ್ಣಿಸಿದರು. ಬಲಾತ್ಕಾರದಿಂದ ಆಕೆಯಿಂದ ಕುಟುಂಬವನ್ನು ಬೇರ್ಪಡಿಸಿ, ಆಕೆಯ ಪತಿ ಹಾಗು ಮಕ್ಕಳನ್ನು ಇತರ ಎಂಟು ಸಾವಿರ ಅಮಾಯಕ ಪುರುಷರು ಮತ್ತು ಮಕ್ಕಳ ಜತೆ ಹತ್ಯೆ ಮಾಡಲಾಗಿತ್ತು. ಹತೀಝಾ ಅವರ ತಂದೆ, ಇಬ್ಬರು ಸಹೋದರರು ಮತ್ತು ಅವರ ಕುಟುಂಬದ ಇತರ ಹಲವು ಮಂದಿಯನ್ನೂ ಹತ್ಯೆ ಮಾಡಲಾಗಿತ್ತು.

ಈ ನರಮೇಧ ನಡೆಸಿದವರು ಇನ್ನಷ್ಟು ಕ್ರೌರ್ಯ ಮುಂದುವರಿಸಿ ಸಂತ್ರಸ್ತರ ದೇಹಗಳನ್ನು ಕೂಡಾ ನಾಶಪಡಿಸಿದ್ದರು. 15 ವರ್ಷಗಳವರೆಗೆ ಹತೀಝಾ ತನ್ನ ಕುಟುಂಬದ ಪಳೆಯುಳಿಕೆಗಾಗಿ ಹುಡುಕಾಟ ನಡೆಸಿದ್ದರು. ಹತ್ಯಾಕಾಂಡದ ಸ್ರೆಬ್ರೆನಿಕಾಗೆ ಮೊಟ್ಟಮೊದಲು ವಾಪಸ್ಸಾದ ಮಹಿಳೆಯರ ಪೈಕಿ ಇವರೂ ಒಬ್ಬರು. ತಬ್ಬಲಿಯಾಗಿ, ಒಬ್ಬಂಟಿಯಾಗಿ, ಬೆದರಿಕೆ ಮತ್ತು ದಾಳಿಯನ್ನು ಎದುರಿಸಿ, ನರಮೇಧ ನಡೆದೇ ಇಲ್ಲ ಎಂದು ಬಿಂಬಿಸುವ ನಿರಂತರ ಪ್ರಯತ್ನದ ವಾತಾವರಣದಲ್ಲಿ ಬದುಕು ಸಾಗಿಸುತ್ತಾ ಬಂದಿದ್ದಾರೆ.

ಅಂತಿಮವಾಗಿ ಪತಿ ಹಾಗೂ ಇಬ್ಬರು ಮಕ್ಕಳ ಕಳೇಬರವನ್ನು ಕೊನೆಗೂ ಪತ್ತೆ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದರು. ಆದರೆ ಅಂತ್ಯಸಂಸ್ಕಾರ ನಡೆಸಲು ಕಿರಿ ಮಗ ಅಲ್ಮೀರ್‌ನ ಕಾಲಿನ ಸಣ್ಣ ಮೂಳೆಗಳು ದೊರಕಿದ್ದವು. ಆ ಕ್ಷಣದ ಈ ಹೃದಯ ವಿದ್ರಾವಕ ನೋವಿನಲ್ಲಿ ದಿನ ಕಳೆಯುವ ಬದಲು, ಆಕೆ ತಾನು ಅದೃಷ್ಟವಂತೆ ಎಂದು ಹೇಳಿಕೊಂಡಿದ್ದರು. ಹಲವು ಮಂದಿ ತಾಯಂದರಿಗೆ ಇಂದಿಗೂ ಈ ಸಣ್ಣ ಸಮಾಧಾನವೂ ಸಿಕ್ಕಿಲ್ಲ ಎಂದು ಹತೀಝಾ ಹೇಳಿದ್ದರು. 

ಹಲವು ವಿಧದಿಂದ ಹತೀಝಾ ಮಹ್ಮದೊವಿಕ್ ನನಗೆ ಬೋಸ್ನಿಯಾ ಯುದ್ಧದಲ್ಲಿ ಬದುಕುಳಿದ ಹಲವು ಮಂದಿ ಬೋಸ್ನಿಯಾ ಮಹಿಳೆಯರನ್ನು ನೆನಪು ಮಾಡಿಕೊಟ್ಟರು. ಗಾಢವಾದ ಮನೋಬಲ ಹಾಗು ಸ್ಥೈರ್ಯವನ್ನು ಕ್ರೋಢೀಕರಿಸಿಕೊಂಡು, ಸಹಿಷ್ಣುತೆಯಿಂದ ಅವಮಾನವನ್ನು ಸಹಿಸಿಕೊಂಡು, ದ್ವೇಷಕ್ಕೆ ಅವಕಾಶವಿಲ್ಲದಂತೆ ಹತೀಝಾ ಬದುಕು ಸಾಗಿಸಿದ ರೀತಿ ಅನನ್ಯ.

ಹತೀಝಾ ಒಂದು ವಿಶಿಷ್ಟ ಉದಾಹರಣೆಯಾಗಿದ್ದರು. 23 ವರ್ಷಗಳವರೆಗೆ ಅವರು ಸತ್ಯ ಮತ್ತು ನ್ಯಾಯಕ್ಕಾಗಿ ಅವಿರತವಾಗಿ ಹೋರಾಡಿದ್ದರು. ಎಂದಿಗೂ ಅವರು ವಿಶೇಷ ಸ್ಥಾನಮಾನವನ್ನು ಆಗ್ರಹಿಸಲಿಲ್ಲ. ಆದರೆ ಸ್ರೆಬ್ರೆನಿಕಾದ ಎಲ್ಲ ತಾಯಂದಿರ ಪರವಾಗಿ ಅವರು ದನಿ ಎತ್ತಿದರು. ಸಂತ್ರಸ್ತರ ಮಧ್ಯೆ ಎಂದೂ ಭೇದ ಭಾವ ಎಣಿಸಲಿಲ್ಲ. ಬದಲಾಗಿ ಎಲ್ಲರೂ  ಸಮಾನ ಗೌರವ ಮತ್ತು ಘನತೆಗೆ ಅರ್ಹರು ಎಂದೇ ಪರಿಗಣಿಸಿದ್ದರು. ಅವರ ಆರೋಗ್ಯ ಹದಗೆಟ್ಟರೂ, ಸಿರಿಯಾದಲ್ಲಿರುವ ನಿರಾಶ್ರಿತರಿಗೆ ಆಹಾರ ಮತ್ತು ಔಷಧಿ ಒದಗಿಸಲು ಪರಿಹಾರ ಕಾರ್ಯವನ್ನು ಸಂಘಟಿಸಿದ್ದರು. ಎಲ್ಲ ಒತ್ತಡಗಳನ್ನು ಎದುರಿಸಿ 65ನೇ ವಯಸ್ಸಿನಲ್ಲೇ ಅವರು ಕೊನೆಯುಸಿರೆಳೆದರು. ನಿಸ್ಸಂದೇಹವಾಗಿ ಅವರ ಸಾವು ನನಗೆ ಮತ್ತು ಅವರ ಸಂಪರ್ಕದಲ್ಲಿದ್ದ ಎಲ್ಲರಿಗೆ ಅಪಾರ ನೋವು ತಂದಿದೆ.

ನ್ಯಾಯಕ್ಕಾಗಿ ನಡೆಸಿದ ಹೋರಾಟ, ಸ್ರೆಬ್ರೆನಿಕಾದಲ್ಲಿ ಉಳಿದವರ ಭದ್ರತೆಗಾಗಿ ನಡೆಸಿದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಹತೀಝಾ  ಮರೆಯಾಗಿರುವುದು ಬೋಸ್ನಿಯಾದ ಗಾಯಗಳ ಆಳಕ್ಕೆ ಸಾಕ್ಷಿ ಎನ್ನಬಹುದು. ಹಲವು ವರ್ಷಗಳ ಕಾಲ ಅವರು ಹೊತ್ತುಕೊಂಡ ಹೊರೆಯನ್ನು ಇತರರು ಹೊರಲು ಇದೀಗ ಮುಂದಾಗಬೇಕು. ಅವರು ಇನ್ನಿಲ್ಲವಾದರೂ ಅವರ ನಿದರ್ಶನ ಮಾತ್ರ ಆಕೆಯನ್ನು ಅರಿತವರ ಮನಗಳಲ್ಲಿ ಜೀವಂತ. ಜತೆಗೆ ನಾವು ಇತರಿಗೆ ಹೇಳುವ ಕಥೆಗಳಲ್ಲಿ ಅವರು ಸದಾ ಜೀವಂತವಿರುತ್ತಾರೆ ಮತ್ತು ಸ್ರೆಬ್ರೆರಿಕಾದ ನೆನಪುಗಳು ಎಂದೂ ಮಾಸಲಾರವು.

ಅವರ ಸಾವು ನನ್ನಲ್ಲಿ ಅಪಾರ ಬೇಸರ ಮೂಡಿಸಿದೆ ಮತ್ತು ಬೋಸ್ನಿಯಾ- ಹರ್ಜಗೋವಿನ ಯುದ್ಧದ ಎಲ್ಲ ಸಂತ್ರಸ್ತರ ಪಾಲಿನ ನನ್ನ ದುಃಖವನ್ನು ಹೆಚ್ಚಿಸಿದೆ. ಹತೀಝಾ ಅವರನ್ನು ಕೃತಜ್ಞತೆಯಿಂದ ನೆನೆಯುವವೆರಲ್ಲಿ ನಾನು ಏಕಾಂಗಿಯಲ್ಲ ಎನ್ನುವ ಖಾತ್ರಿ ನನಗಿದೆ. ಸ್ರೆಬ್ರೆನಿಕಾ ನರಮೇಧದಿಂದ ಅಥವಾ ಯಾವುದೇ ಜನಸಮುದಾಯದ ಮೇಲಿನ ಹಿಂಸಾತ್ಮಕ ದ್ವೇಷದಿಂದ ಕಲಿತುಕೊಳ್ಳುವುದು ಸಾಕಷ್ಟಿದೆ. ಇಂದು ಹತೀಝಾ ಅವರ ಸಾವು ಹಾಗೂ ಇಡೀ ದೇಶ ಅವರಿಗಾಗಿ ಆಚರಿಸುವ ಶೋಕವು ಒಂದು ಏಕಾಂಗಿ ಜೀವಕ್ಕೆ ಇರುವ ಶಕ್ತಿಯನ್ನು ಪ್ರತಿಫಲಿಸುತ್ತದೆ.

ಹತೀಝಾ ಮಹ್ಮದೊವಿಕ್ ಪ್ರಾಮಾಣಿಕ ಬದುಕನ್ನು ಬಾಳಿದ್ದರು. ಅವರು ಎಂದಿಗೂ ಸತ್ಯ ಅಥವಾ ನಿಷ್ಪಕ್ಷಪಾತದ ಪ್ರಜ್ಞೆಗೆ ಯಾವುದೇ ಬೆದರಿಕೆ ಅಥವಾ ಭ್ರಷ್ಟಾಚಾರ ತಗುಲಲು ಅವಕಾಶ ನೀಡಲಿಲ್ಲ. ನಾವು ಕೂಡಾ ನಮ್ಮ ಜೀವಿತಾವಧಿಯಲ್ಲಿ ನ್ಯಾಯ ಪಡೆಯಲು ಸಾಧ್ಯವಾಗದಿರಬಹುದು. ಆದರೆ ಅವರ ನಿದರ್ಶನವನ್ನು ನಾವು ಅನುಸರಿಸುವುದಾದರೆ, ನಾವು ತಪ್ಪು ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. 

(ಖ್ಯಾತ ಹಾಲಿವುಡ್ ನಟಿ, ನಿರ್ದೇಶಕಿ ಏಂಜೆಲಿನಾ ಜೋಲಿ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ವಿಶೇಷ ರಾಯಭಾರಿ.) 

ಕೃಪೆ: cnn.com 

Writer - ಏಂಜೆಲಿನಾ ಜೋಲಿ

contributor

Editor - ಏಂಜೆಲಿನಾ ಜೋಲಿ

contributor

Similar News