ಪತ್ನಿ ಜೊತೆ ಹೀಗೆ ಹಗೆ ತೀರಿಸಿಕೊಂಡ ವಕೀಲ !

Update: 2018-07-25 08:50 GMT

ಚಂಡೀಗಢ, ಜು.25: ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ಕುತೂಹಲಕಾರಿ ವಿದ್ಯಮಾನವೊಂದು ನಡೆದಿದೆ. ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ 30 ವರ್ಷದ ಮಹಿಳೆಯೊಬ್ಬಳು ನ್ಯಾಯಾಲಯದಲ್ಲಿ ಎಲ್ಲರೆದುರು ಗಳಗಳನೇ ಅತ್ತು ತನ್ನ ವಕೀಲ ಪತಿ ತನಗೆ ಮಾಸಿಕ ಜೀವನಾಂಶವಾಗಿ 24,600 ರೂ.ಗಳನ್ನು 1 ಮತ್ತು 2 ರೂ. ನಾಣ್ಯಗಳ ರೂಪದಲ್ಲಿ ನೀಡಿದ್ದಾನೆಂದು ದೂರಿದ್ದಾಳೆ.

ಇದು ತನಗೆ ಕಿರುಕುಳವಲ್ಲದೆ ಮತ್ತಿನ್ನೇನಲ್ಲ ಎಂದು ಆಕೆ ಅಳುತ್ತಾ ಹೇಳಿದ್ದಾಳೆ. ತನ್ನ ಪತಿ ತನಗೆ ನೀಡಬೇಕಾದ ಮಾಸಿಕ ಜೀವನಾಂಶ 25,000 ರೂ. ಆಗಿದ್ದರೆ ಆತ ನೂರರ ನಾಲ್ಕು ನೋಟುಗಳನ್ನು ಹೊರತುಪಡಿಸಿ ಉಳಿದ 24,600 ರೂ. ಮೊತ್ತದ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳನ್ನು ನೀಡಿದ್ದಾನೆ. ಈ ಪ್ರಕರಣದ ವಿಚಾರಣೆ ಜುಲೈ 27ಕ್ಕೆ ಮುಂದೂಡಲ್ಪಟ್ಟಿದೆ. ಮಹಿಳೆಯ ಪತಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ವಕೀಲನಾಗಿದ್ದಾನೆ.

2014ರಲ್ಲಿ ಆತ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ, ಎರಡು ತಿಂಗಳ ನಂತರ ಪತ್ನಿಗೆ ರೂ 25,000 ಮಾಸಿಕ ಜೀವನಾಂಶ ನೀಡುವಂತೆ  ನ್ಯಾಯಾಲಯ ಆತನಿಗೆ ಹೇಳಿತ್ತು. ಆತ ವಿಫಲನಾದಾಗ ಆ ಮಹಿಳೆ  ಹೈಕೋರ್ಟಿನ ಕದ ತಟ್ಟಿದ್ದಳು. ಆಗ ಹೈಕೋರ್ಟ್ ಆತನಿಗೆ ರೂ 50,000 ಜೀವನಾಂಶ ನೀಡಬೇಕೆಂದು ಹೇಳಿತ್ತು.

ಕೊನೆಗೆ ಆತ ರೂ  25,000 ಮೊತ್ತವನ್ನು ತನ್ನ ಪರಿತ್ಯಕ್ತ ಪತ್ನಿಗೆ ನೀಡಲು ಒಪ್ಪಿ ಅದನ್ನು ಜಿಲ್ಲಾ ನ್ಯಾಯಾಲಯದಲ್ಲಿ ನೀಡಿದರೂ ಅದು ನಾಣ್ಯಗಳ ರೂಪದಲ್ಲಾಗಿದ್ದುದರಿಂದ ಆತನ ಪತ್ನಿಇದು ಕಿರುಕುಳ, ಕಾನೂನಿನ ಅಣಕ ಎಂದು ದೂರಿದ್ದಳು. ತನ್ನಲ್ಲಿ ಹಣವಿಲ್ಲವೆಂದು ಆತ ಹೇಳಿದಾಗ ಆಕೆ ಅದನ್ನು ಒಪ್ಪಲು ಸಿದ್ಧಲಿರಲಿಲ್ಲ. ``ಆತನೊಬ್ಬ ವಕೀಲ ಹಾಗೂ ಹಲವಾರು ಉನ್ನತ ಕಕ್ಷಿಗಾರರು ಆತನಿಗಿದ್ದಾರೆ, ಮೇಲಾಗಿ ಆತನ ಹೆಸರಿನಲ್ಲಿ ಹಲವಾರು ಆಸ್ತಿಗಳಿವೆ'' ಎಂದು ಆಕೆ ಹೇಳಿದ್ದಾಳೆ.

ಆದರೆ ಪತಿರಾಯ ಮಾತ್ರ ತನ್ನ ನಿಲುವಿಗೆ ಅಂಟಿಕೊಂಡಿದ್ದು ಜೀವನಾಂಶವನ್ನು ನೋಟಿನ ರೂಪದಲ್ಲಿಯೇ ನೀಡಬೇಕೆಂದೇನೂ ನ್ಯಾಯಾಲಯ ಹೇಳಿಲ್ಲ ಎಂದು ವಾದಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News