ಜಗತ್ತಿಗೆ ಕಾಫಿಯ ಘಮಲು ಪರಿಚಯವಾದ ಹಿಂದಿನ ಕಥೆ ಗೊತ್ತಾ?

Update: 2018-07-25 11:33 GMT

ಕಾಫಿ ಯಾರಿಗಿಷ್ಟವಿಲ್ಲ ಹೇಳಿ? ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾದ ಪೇಯವೊಂದಿದ್ದರೆ ಅದು ಕಾಫಿಯಲ್ಲದೆ ಬೇರೆ ಯಾವುದೂ ಅಲ್ಲ. ಆಫ್ರಿಕಾ ಖಂಡದ ಇಥಿಯೋಪಿಯಾ ಕಾಫಿಗೆ ಜನ್ಮ ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಆಫ್ರಿಕಾದಲ್ಲಿ ಅತ್ಯಂತ ಹೆಚ್ಚು ಕಾಫಿ ಸೇವಿಸುವುದೂ ಇಥಿಯೋಪಿಯನ್ನರೇ. ಕಾಫಿಯ ತೊಟ್ಟಿಲು ಎಂದೇ ಬಣ್ಣಿಸಲಾಗುತ್ತಿರುವ ಇಥಿಯೋಪಿಯಾ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ಜಗತ್ತಿನ ಐದನೇ ದೇಶವಾಗಿದ್ದು, ಜರ್ಮನಿ, ಫ್ರಾನ್ಸ್, ಅಮೆರಿಕ, ಬೆಲ್ಜಿಯಂ ಮತ್ತು ಸೌದಿ ಅರೇಬಿಯಾ ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಿಗೆ ಕಾಫಿಯನ್ನು ರಪ್ತು ಮಾಡುತ್ತಿದೆ.

ಅಂದ ಹಾಗೆ ಕಾಫಿ ಜಗತ್ತಿಗೆ ಪರಿಚಯವಾದ ಕಥೆ ರೋಚಕವಾಗಿದೆ. ಸುಮಾರು 12 ಶತಮಾನಗಳ ಹಿಂದೆ ಅದೊಂದು ದಿನ ಮಧ್ಯಾಹ್ನ ಕಲ್ಡಿ ಎಂಬ ಕುರಿಗಾಹಿ ಇಥಿಯೋಪಿಯಾದ ನಡುಗಡ್ಡೆಯೊಂದರಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಗಿಡವೊಂದರಲ್ಲಿ ಗೊಂಚಲು ಗೊಂಚಲಾಗಿದ್ದ ಕೆಂಪುಹಣ್ಣುಗಳು ಆತನ ಕಣ್ಣಿಗೆ ಬಿದ್ದಿದ್ದವು. ಅದೇನೆಂದು ಆತನಿಗೆ ಗೊತ್ತಿರಲಿಲ್ಲ ಮತ್ತು ಹಿಂದೆಂದೂ ಆತ ಅವುಗಳನ್ನು ಕಂಡಿರಲೂ ಇಲ್ಲ. ನೋಡಿಯೇ ಬಿಡೋಣವೆಂದು ಕೆಲವು ಹಣ್ಣುಗಳನ್ನು ಕಿತ್ತು ತಿಂದಿದ್ದ. ತಿಂದ ಬಳಿಕ ತನ್ನಲ್ಲಿ ಉತ್ಸಾಹ,ಶಕ್ತಿ ಹೆಚ್ಚಿದಂತೆ ಕಲ್ಡಿಗನಿಸಿತ್ತು. ಇದರಿಂದ ಆತನ ಕುತೂಹಲ ಗರಿಗೆದರಿದ್ದು,ಕೆಲವು ಹಣ್ಣುಗಳನ್ನು ಸ್ಥಳೀಯ ಬೌದ್ಧಮಠಕ್ಕೆ ಒಯ್ದು ತೋರಿಸಿದ್ದ. ಅದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸದ ಅಲ್ಲಿಯ ಬೌದ್ಧ ಸನ್ಯಾಸಿಗಳು ಇದೇನೂ ಉಪಯೋಗವಿಲ್ಲದ್ದು ಎಂದುಕೊಂಡು ಹಣ್ಣುಗಳನ್ನು ಅಲ್ಲಿಯೇ ಉರಿಯುತ್ತಿದ್ದ ಬೆಂಕಿಗೆಸೆದಿದ್ದರು. ಹಣ್ಣುಗಳು ಬೆಂಕಿಯಲ್ಲಿ ಹುರಿಯತೊಡಗಿದಂತೆ ನವಿರಾದ ಅದ್ಭುತ ಪರಿಮಳ ಆ ಸ್ಥಳದ ತುಂಬೆಲ್ಲ ಹರಡಿತ್ತು ಮತ್ತು ಆ ಬೀಜಗಳೇ ಜಗತ್ತಿನ ಮೊಟ್ಟಮೊದಲ ಕಾಫಿ ತಯಾರಿಕೆಗೆ ಬಳಕೆಯಾಗಿದ್ದವು. ಇದು ಕಾಫಿ ಕುರಿತು ಜನಪ್ರಿಯವಾಗಿರುವ ದಂತಕಥೆ.

ಆಗಿನಿಂದಲೂ ಇಥಿಯೋಪಿಯಾ ಅದ್ಭುತ ಕಾಫಿಗೆ ಹೆಸರಾಗಿದೆ. ಕಾಫಿ ಬೀಜಗಳ ರಫ್ತಿನಿಂದ ಆ ದೇಶವು ಬಿಲಿಯಟ್ಟಲೆ ಡಾಲರ್ ಸಂಪಾದಿಸುತ್ತಿದ್ದು,ಇದು ಅದರ ಪ್ರಮುಖ ಆದಾಯಮೂಲವಾಗಿದೆ.

ಇಥಿಯೋಪಿಯಾ ಕಾಫಿಯನ್ನು ರಪ್ತು ಮಾಡುವುದಷ್ಟೇ ಅಲ್ಲ,ಅದು ಕಾಫಿಯನ್ನು ಬಹುವಾಗಿ ಪ್ರೀತಿಸುತ್ತಿದೆ. ರಾಜಧಾನಿ ಅಡಿಸ್ ಅಬಾಬಾದ ರಸ್ತೆಗಳುದ್ದಕ್ಕೂ ಕಾಫಿ ಶಾಪ್‌ಗಳಿವೆ. ಆಫ್ರಿಕಾದಲ್ಲಿ ಬಳಕೆಯಾಗುವ ಕಾಫಿಯ ಶೇ.71.6ರಷ್ಟು ಸಿಂಹಪಾಲು ಇಥಿಯೋಪಿಯನ್ನರ ಹೊಟ್ಟೆಯನ್ನು ಸೇರುತ್ತದೆ.

ಅಲ್ಲಿಯ ಅತ್ಯಂತ ಪ್ರಸಿದ್ಧ ಕಾಫಿ ಬ್ರಾಂಡ್ ಆಗಿರುವ ಟೊಮೊಕಾ ಅಡಿಸ್ ಅಬಾಬಾವೊಂದರಲ್ಲೇ ಆರು ಬೃಹತ್ ಕಾಫಿ ಶಾಪ್‌ಗಳನ್ನು ಹೊಂದಿದೆ. ಕಳೆದ ಆರು ದಶಕಗಳಿಗೂ ಹೆಚ್ಚಿನ ಸಮಯದಿಂದ ಒಂದೇ ಕುಟುಂಬದ ಮೂರು ತಲೆಮಾರುಗಳು ಟೊಮೊಕಾದ ಒಡೆತನವನ್ನು ಹೊಂದಿವೆ. ಕಂಪನಿಯು ವಿದೇಶಗಳಲ್ಲಿಯೂ ತನ್ನ ಕಾಫಿ ಶಾಪ್‌ಗಳನ್ನು ತೆರೆದಿದೆ.

 ಸಾಂಪ್ರದಾಯಿಕ ಕಾಫಿ ಸಮಾರಂಭವು ಇಥಿಯೋಪಿಯನ್ನರ ಪಾಲಿಗೆ ಅತ್ಯಂತ ಪವಿತ್ರವಾಗಿದೆ. ಅಲ್ಲಿ ಕೇವಲ ಕಾಫಿ ಸೇವನೆ ಮಾತ್ರ ನಡೆಯುವುದಿಲ್ಲ,ಅದು ಅವರ ಆಧ್ಯಾತ್ಮಿಕ ಸಮಾರಂಭವಾಗಿದೆ.

ಈ ದೇಶದಲ್ಲಿ ಕಾಫಿ ಎಂದರೆ ಬೆಳಿಗ್ಗೆ ಎದ್ದು ಕುಡಿಯುವ ಔಪಚಾರಿಕತೆಯಲ್ಲ. ಇಲ್ಲಿ ಕಾಫಿ ಎಷ್ಟು ಮಹತ್ವ ಪಡೆದಿದೆ ಎಂದರೆ ಇಥಿಯೋಪಿಯನ್ನರು ಸಾಮಾಜಿಕವಾಗಿ ಪರಸ್ಪರ ಬೆರೆಯಲು ಮತ್ತು ಉದ್ಯಮಿಗಳು ಮಾತುಕತೆಗಳನ್ನು ನಡೆಸಲು ಕಾಫಿಶಾಪ್‌ಗಳಲ್ಲಿಯೇ ಸೇರುತ್ತಾರೆ ಎನ್ನುತ್ತಾರೆ ಟೊಮೆಕೊದ ಮುಖ್ಯಸ್ಥ ವಂಡ್‌ವೊಸೆನ್ ಮೆಷೆಷಾ.

ದೇಶದ ಒಟ್ಟು ಉತ್ಪಾದನೆಯ ಕೇವಲ ಶೇ.20ರಷ್ಟು ಕಾಫಿಯನ್ನು ವಾಣಿಜ್ಯಿಕವಾಗಿ ಬೆಳೆಯಲಾಗುತ್ತಿದೆ. ಉಳಿದದ್ದನ್ನು ಸಣ್ಣ ಹಿಡುವಳಿದಾರರು ಬೆಳೆಯುತ್ತಾರೆ. ಉತ್ಪಾದನೆಯ ಪ್ರಮಾಣಕ್ಕಿಂತ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳುತ್ತಿರುವುದು ಇಲ್ಲಿಯ ಕಾಫಿಯ ವೈಶಿಷ್ಟವಾಗಿದೆ.

  ಇಲ್ಲಿ ಕಾಫಿ ಸೇವನೆಯು ಮನೆಗಳಲ್ಲಿ ನಡೆಯುವ ಗಾಢವಾದ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಮನೆಯೊಡತಿ ಕಾಫಿಯನ್ನು ತಯಾರಿಸುತ್ತಿದ್ದರೆ ಅದರ ಪರಿಮಳ ನೆರೆಯವರನ್ನೂ ಆಕರ್ಷಿಸುತ್ತದೆ. ಮನೆಯ ಪ್ರತಿಯೊಬ್ಬರಿಗೂ ಮೂರು ಕಪ್ ಕಾಫಿಯನ್ನು ನೀಡಲಾಗುತ್ತದೆ. ಕೊನೆಯ ಕಪ್ ಅನ್ನು ‘ಬರಕಾ’ಎಂದು ಕರೆಯಲಾಗುತ್ತದೆ ಮತ್ತು ಅದು ಆಶೀರ್ವಾದವನ್ನು ಸೂಚಿಸುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರು ಯಾವುದೇ ಭೇದವಿಲ್ಲದೆ ಈ ಸಂಪ್ರದಾಯವನ್ನು ಪಾಲಿಸುತ್ತಾರೆ.

ಅಂದ ಹಾಗೆ ಇಥಿಯೋಪಿಯಾದ ಕಾಫಿಯಲ್ಲಿ 5,000 ವಿವಿಧ ಮಾದರಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News