×
Ad

‘ತಿಂಗಳಲ್ಲಿ ವಿಶೇಷ ಉದ್ದೇಶ ವಾಹಕ(ಎಸ್‌ಪಿವಿ) ಸ್ಥಾಪನೆ’

Update: 2018-07-25 20:43 IST

ಬೆಂಗಳೂರು, ಜು.25: ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳನ್ನು ತ್ವರಿತಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಇಂದು ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು.

ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಕುರಿತು ರೈಲ್ವೆ ಇಲಾಖೆಯ ಪಾಲುದಾರಿಕೆಯೊಂದಿಗೆ ವಿಶೇಷ ಉದ್ದೇಶ ವಾಹಕವನ್ನು ಒಂದು ತಿಂಗಳೊಳಗೆ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂಸ್ಥೆಯಲ್ಲಿ ರೈಲ್ವೆ ಶೇ.49 ಹಾಗೂ ರಾಜ್ಯ ಸರಕಾರ ಶೇ.51ರ ಪಾಲುದಾರಿಕೆ ಹೊಂದಿರುತ್ತವೆ. ಇದಕ್ಕಾಗಿ ಈಗಾಗಲೇ 350 ಕೋಟಿ ರೂ. ಮಂಜೂರಾಗಿದ್ದು, ರೈಲ್ವೆ ಇಲಾಖೆಗೆ ಈಗಾಗಲೇ 100 ಕೋಟಿ ರೂ. ಠೇವಣಿ ಇಡಲಾಗಿದೆ. ಈ ಯೋಜನೆಯಡಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಸುಮಾರು 444 ಕಿ.ಮೀ. ರೈಲ್ವೆ ಮಾರ್ಗದ ಸದ್ಬಳಕೆಯೊಂದಿಗೆ, ಕೆಲವೆಡೆ ವಿಸ್ತರಣೆ, ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಗಳು ಹಾಗೂ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಹೆಚ್ಚಿನ ಜನರಿಗೆ ನಗರದಲ್ಲಿ ತ್ವರಿತ ಸಂಚಾರಕ್ಕೆ ಅವಕಾಶವಾಗುವುದು. ಈಗಾಗಲೇ 15 ರೈಲುಗಳ ಸಂಪರ್ಕ ಒದಗಿಸಲಾಗಿದ್ದು, 1745 ಕೋಟಿ ರೂ. ವೆಚ್ಚದಲ್ಲಿ 116 ಹೊಸ ರೈಲುಗಳ ಸೇವೆ ಒದಗಿಸಲು ಅವಕಾಶವಾಗುತ್ತದೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ಹೊಸದಿಲ್ಲಿಯ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ್ ಹಾಗೂ ತಜ್ಞ ಪ್ರಶಾಂಶ್ ಶ್ರೀನಿವಾಸ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಎಚ್.ಡಿ.ರೇವಣ್ಣ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News