×
Ad

ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2018-07-25 20:45 IST

ಬೆಂಗಳೂರು, ಜು.25: ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲು ಪಟ್ಟಿ ಪ್ರಕಟಿಸದ ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಜುಲೈ 31ರೊಳಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮೌಖಿಕ ನಿರ್ದೇಶನ ನೀಡಿದೆ.

ನ್ಯಾಯಾಲಯದ ಮುಂದೆ ಎರಡು ಬಾರಿ ಭರವಸೆ ನೀಡಿರುವ ರಾಜ್ಯ ಸರಕಾರ ಈವರೆಗೂ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಪಟ್ಟಿ ಪ್ರಕಟ ಮಾಡಿಲ್ಲ. ಹೀಗಾಗಿ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಸರಕಾರದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿತು.

ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಪಟ್ಟಿ ಪ್ರಕಟಿಸುವ ಸಂಬಂಧ ಸರಕಾರ ನೀಡಿದ್ದ ಭರವಸೆಯನ್ನು ಪರಿಗಣಿಸಿ ಈ ಹಿಂದೆ ಅರ್ಜಿ ಇತ್ಯರ್ಥಪಡಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಸರಕಾರ ಮತ್ತೆ ಮತ್ತೆ ವಿಳಂಬ ಮಾಡುತ್ತಿದ್ದು, ಇದು ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದೆ. ಚುನಾವಣೆ ವಿಳಂಬ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತದೆ. ಇದೊಂದು ಗಂಭೀರ ವಿಚಾರವಾಗಿದ್ದು, ಇದರಿಂದ ಸಾಂವಿಧಾನಿಕ ಸಂಸ್ಥೆಗಳೇ ಕುಸಿದು ಬೀಳುತ್ತವೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.

ವಿಚಾರಣೆಗೆ ಖುದ್ದು ಹಾಜರಿದ್ದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಆಗಸ್ಟ್ ಮೊದಲ ವಾರದಲ್ಲಿ ಮೀಸಲು ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ, ಈಗಾಗಲೇ ಸರಕಾರ ಮೀಸಲು ಪಟ್ಟಿ ಪ್ರಕಟಿಸಲು ಎರಡು ಬಾರಿ ಕಾಲಾವಕಾಶ ಪಡೆದಿದೆ. ಕಳೆದ ಜೂ. 14ರಂದು ನೀಡಿದ್ದ ಭರವಸೆಯ ಪ್ರಕಾರ ಜುಲೈ 12ರೊಳಗೆ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲು ಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಬೇಕಿತ್ತು. ಆದರೆ ಈವರೆಗೂ ಮೀಸಲು ಪಟ್ಟಿ ಪ್ರಕಟಿಸದ ಸರಕಾರ, ಇದೀಗ ಮತ್ತೆ ಆಗಸ್ಟ್ ವರೆಗೆ ಸರಕಾರ ಕಾಲಾವಕಾಶ ಕೋರುತ್ತಿದೆ. ಹೀಗಾದರೆ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು. ಇದರಿಂದ ಎಜಿ ಉದಯಹೊಳ್ಳ, ಈ ಸಂಬಂಧ ತಾವೇ ಖುದ್ದು ಸರಕಾರದ ಜತೆ ಚರ್ಚಿಸಿ ಜುಲೈ 31ರೊಳಗೆ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠಕ್ಕೆ ಭರವಸೆ ನೀಡಿದರು. ಇದರಿಂದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜು.31ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News