ವಿಕಲಚೇತನ ಮಕ್ಕಳ ಏಳಿಗೆಗೆ ವಿಶೇಷ ಆದ್ಯತೆ: ಸಚಿವೆ ಜಯಮಾಲಾ

Update: 2018-07-26 05:25 GMT

ಮಂಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲಾ ಸಚಿವೆಯಾದ ಬಳಿಕ ಪ್ರಥಮ ಬಾರಿಗೆ ಮಂಗಳೂ ರಿಗೆ ಆಗಮಿಸಿದ ಸಂದರ್ಭದಲ್ಲಿ ‘ವಾರ್ತಾಭಾರತಿ’ ಕಚೇರಿಗೆ ಭೇಟಿ ನೀಡಿ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

►ರಾಜ್ಯದಲ್ಲಿ ಶೋಷಿತ ದಮನಿತ ಮಹಿಳೆ ಯರಿಗಾಗಿ ನೀವು ಯಾವ ರೀತಿ ನೆರವಾಗ ಬೇಕೆಂದು ತೀರ್ಮಾನಿಸಿದ್ದೀರಿ?

ಜಯಮಾಲಾ: ನಮ್ಮಲ್ಲಿ ಹಲವು ಆಚರಣೆಗಳು, ನಂಬಿಕೆಗಳು ಇವೆ. ಆದರೆ ಕೆಲವು ಜೀವ ವಿರೋಧಿಯಾದ ಚಟುವಟಿಕೆಗಳ ಬಗ್ಗೆ ನಮ್ಮ ಸಮಾಜ ಜಾಗೃತ ವಾಗಬೇಕು. ನಮ್ಮ ಹಿಂದಿನ ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್, ಸ್ವಾಮಿ ದಯಾನಂದ ಸರಸ್ವತಿ, ಸಾವಿತ್ರಿ ಬಾಯಿ ಫುಲೆಯವರಂತಹ ಜ್ಞಾನಿಗಳಿಂದಾಗಿ ನಮ್ಮ ನಡುವೆ ಇದ್ದ ಹಲವು ಮೂಢನಂಬಿಕೆಗಳು ಮಾಯವಾಗಿವೆ. ಇದರಿಂದ ಮಹಿಳೆಯರಿಗೆ ಮಕ್ಕಳಿಗೆ ಸಮಾಜಕ್ಕೆ ಒಳ್ಳೆಯದಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಅವರಿಗೆ ನೆರವು ನೀಡುವ ಉದ್ದೇಶವಿದೆ.ಮೊದಲಾಗಿ ಅವರನ್ನು ಅವರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕಾಗಿದೆ.

►ಸರಕಾರ ಜಾರಿ ಮಾಡಲು ಉದ್ದೇಶಿಸಿ ರುವ ಹೊಸ ಸಾಂಸ್ಕೃತಿಕ ನೀತಿಯನ್ನು ಯಾವ ಉದ್ದೇಶದಿಂದ ನೀವು ಜಾರಿ ಮಾಡಬೇಕು ಎಂದು ಯೋಚಿಸಿದ್ದೀರಿ?

ಜಯಮಾಲ: ಒಳ್ಳೆಯ ಉದ್ದೇಶದಿಂದ ಈ ನೀತಿಯನ್ನು ಜಾರಿ ಮಾಡಲು ಉದ್ದೇಶಿಸಿದ್ದೇವೆ. ಪ್ರತಿ ಭಾಷೆಯ ಜನರ ಸಂಸ್ಕೃತಿಯ ಬಗ್ಗೆ ದಾಖಲೀಕರಣ ಮಾಡುವ ಬಗ್ಗೆ ಯೋಚನೆ ಇದೆ. ನಮ್ಮ ನಾಡಿನ ಬಹು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬಗ್ಗೆ ಅಕಾಡೆಮಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿ ಕೊಟ್ಟಿದ್ದೇವೆ.

►ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರು, ವಿಕಲಚೇತನರು ಸೇರಿದಂತೆ ಎಲ್ಲರ ಅಭಿವೃದ್ಧಿಯ ಹೊಣೆಗಾರಿಕೆ ನಿಮ್ಮ ಮೇಲಿದೆ. ಈ ಸವಾಲನ್ನು ಹೇಗೆ ನಿಭಾಯಿಸುತ್ತೀರಿ?

ಜಯಮಾಲಾ: ಪ್ರತೀ ಇಲಾಖೆಯಲ್ಲೂ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ಅಭಿವೃದ್ಧಿಗೆ ನೀಡುವ ಮೂಲಕ ಅವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಈ ಬಾರಿಯ ಬಜೆಟ್‌ನಲ್ಲಿ ವಿಕಲಚೇತನರಿಗೆ ರಾಜ್ಯದ ಕೇಂದ್ರ ಸ್ಥಾನದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಅವರ ಸಶಕ್ತತೆಗೆ ಕಾರ್ಯಯೋಜನೆಯನ್ನು ರೂಪಿಸುವ ಚಿಂತನೆ ಇದೆ. ಅವರನ್ನು ಒಂದೇ ಸೂರಿನಡಿ ಸೇರಿಸಿ ಅವರಿಗೂ ಮಾನಸಿಕ ಹಾಗೂ ಸಶಕ್ತತೆ ನೀಡುವ ಗುರಿ ಇದೆ. ಮಗು ಗರ್ಭದಲ್ಲಿರುವಾಗಲೇ ಅದರ ಆರೋಗ್ಯದ ಬಗ್ಗೆ ಚಿಂತನೆ ಮಾಡುವ ಯೋಜನೆ ಇಲಾಖೆಯಲ್ಲಿದೆ. ಮಗು ಆರೋಗ್ಯವಂತವಾಗಿ ಹುಟ್ಟಬೇಕು. ಹುಟ್ಟಿದ ಮಗು ಸಾವಿಗೀಡಾಗಬಾರದು ಈ ಪ್ರಮಾಣ ಶೂನ್ಯಕ್ಕೆ ಇಳಿಯಬೇಕು ಎನ್ನುವ ಗುರಿ ಇದೆ.

►ಮಹಿಳಾ ಸಶಕ್ತತೆಯ ಬಗ್ಗೆ ನಿಮ್ಮ ಯೋಜನೆಗಳೇನು?

ಜಯಮಾಲಾ: ಹೆಣ್ಣು ಮಕ್ಕಳು ಗೌರವದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಉತ್ತಮ ಶಿಕ್ಷಣ, ಅವರಿಗೆ ಸರಿಯಾದ ಉದ್ಯೋಗದೊಂದಿಗೆ ಸಮಾಜಮುಖಿಯಾಗಿ ಬದುಕುವ ಅವಕಾಶ ನೀಡಬೇಕು. ಮನೆಯಲ್ಲಿಯೇ ಗಂಡು ಹೆಣ್ಣು ಎಂಬ ಲಿಂಗ ತಾರತಮ್ಯ ದೂರಮಾಡಿ ಸಮಾನತೆಯ ಭಾವನೆಯಿಂದ ಮಕ್ಕಳನ್ನು ಬೆಳೆಸಿದಾಗ ಮಹಿಳೆಯರು ಸಶಕ್ತರಾಗಿ ಸಮಾಜದಲ್ಲಿ ಬದುಕಲು ಸಾಧ್ಯ. ನಾನು ಒಬ್ಬ ತಾಯಿಯಾಗಿ ನನಗೆ ಮಗು ಹುಟ್ಟುವಾಗ ಗಂಡಾಗಲಿ ಹೆಣ್ಣಾಗಲಿ ಆರೋಗ್ಯವಂತ ಮಗು ಹುಟ್ಟಲಿ ಎಂದು ಆಶಿಸಿದ್ದೆ.

►ಸುಶಿಕ್ಷಿತ ಸಮಾಜದಲ್ಲೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯತಡೆಯಲು ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ಯಾವ ಯೋಜನೆಗಳಿವೆ?

ಜಯಮಾಲಾ: ನಮ್ಮ ನಡುವೆ ಇರುವ ಕೆಲವು ಫ್ಯೂಡಲಿಸಂನ ಮನೋಭಾವದ ಪರಿಣಾಮವಾಗಿ ಸಾಕಷ್ಟು ಮಹಿಳೆಯರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನೋವನ್ನೂ ಅನುಭವಿಸಿದ್ದಾರೆ. ಹೆಣ್ಣು ಸುಶಿಕ್ಷಿತಳಾಗಿ ಸಾಕಷ್ಟು ಎತ್ತರಕ್ಕೆ ಏರಿದ್ದರೂ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಈ ಮನೋಭಾವದಲ್ಲಿ ಬದಲಾವಣೆ ಯಾಗಬೇಕಾಗಿದೆ. ನೊಂದ ಮಹಿಳೆಗೆ ನೆರವು ನೀಡಬೇಕಾಗಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರಿಗೆ ಆಸ್ತಿ ಮಾಡುವ ಬದಲು ಅವರನ್ನು ಸಮಾಜದ ಉತ್ತಮ ಆಸ್ತಿಯನ್ನಾಗಿ ಮಾಡಬೇಕಾಗಿದೆ.

►ನಾಟಕ ರಂಗ, ಸಿನೆಮಾರಂಗ ಈಗ ರಾಜಕೀಯ ಪ್ರವೇಶ ಮಾಡಿದ್ದೀರಿ ಸಾಗಿ ಬಂದ ಈ ದಾರಿಯ ಮುಂದಿನ ಹಾದಿ ?

ಜಯಮಾಲಾ:  ನನ್ನನ್ನು ಜನ ಬೆಳೆಸಿದ್ದಾರೆ. ನಾನು ಹದಿಮೂರರ ಹರೆಯದಲ್ಲೇ ಸಿನೆಮಾ ಕ್ಷೇತ್ರ ಪ್ರವೇಶಿಸಿ 75 ಸಿನೆಮಾಗಳಲ್ಲಿ ನಟಿಸಿದ್ದೇನೆ. ಆ ನಂತರ ರಾಜಕೀಯಕ್ಕೆ ಬಂದೆ. ಒಮ್ಮೆ ತಿರುಗಿ ನೋಡಿದಾಗ ಜನ ನನ್ನನ್ನು ಬೆಳೆಸಿರುವುದು, ನನಗೆ ಸಿಕ್ಕಿದ ಅವಕಾಶವನ್ನು ಧನಾತ್ಮಕ ಚಿಂತನೆಯೊಂದಿಗೆ ಬಳಸಿಕೊಂಡೆ. ಜನ ನನ್ನನ್ನು ಬೆಂಬಲಿಸಿದ್ದಾರೆ. ಸಿನೆಮಾರಂಗದಲ್ಲಿ ಡಾ.ರಾಜ್‌ಕುಮಾರ್ ಸೇರಿದಂತೆ ಹಿರಿಯ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಹೊರ ರಾಜ್ಯದಲ್ಲೂ ಅವಕಾಶ ಸಿಕ್ಕಿದೆ. ಅವರ ಋಣ ನನ್ನ ಮೇಲಿದೆ ಎನ್ನುವ ಭಾವನೆ ಇದೆ. ನನ್ನನ್ನು ಬೆಳೆಸಿದ ಜನರ ಋಣ ತೀರಿಸುವ ಹೊಣೆಗಾರಿಕೆ ನನಗಿದೆ.

ಹೆಣ್ಣು ಮಕ್ಕಳು ಗೌರವದಿಂದ ಬದು ಕುವ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಉತ್ತಮಶಿಕ್ಷಣ, ಅವರಿಗೆ ಸರಿಯಾದ ಉದ್ಯೋಗ ದೊಂದಿಗೆ ಸಮಾಜ ಮುಖಿಯಾಗಿ ಬದುಕುವ ಅವಕಾಶ ನೀಡಬೇಕು. ಮನೆಯಲ್ಲಿಯೇ ಗಂಡು ಹೆಣ್ಣು ಎಂಬ ಲಿಂಗ ತಾರತಮ್ಯ ದೂರಮಾಡಿ ಸಮಾನತೆಯ ಭಾವನೆಯಿಂದ ಮಕ್ಕಳನ್ನು ಬೆಳೆಸಿದಾಗ ಮಹಿಳೆಯರು ಸಶಕ್ತರಾಗಿ ಸಮಾಜದಲ್ಲಿ ಬದುಕಲು ಸಾಧ್ಯ.

Writer - ಬಿ.ಎನ್.ಪುಷ್ಪರಾಜ್

contributor

Editor - ಬಿ.ಎನ್.ಪುಷ್ಪರಾಜ್

contributor

Similar News