ಹಫ್ತಾ ನೀಡಲು ನಿರಾಕರಿಸಿದ ಉದ್ಯಮಿ ಸೋದರರ ಗುಂಡಿಕ್ಕಿ ಹತ್ಯೆ

Update: 2018-07-27 10:25 GMT

ಲಕ್ನೋ, ಜು.27: ಇಲ್ಲಿಗೆ ಸಮೀಪದ ಪ್ರತಾಪಘರ್ ಎಂಬಲ್ಲಿ ಗುರುವಾರ ರಾತ್ರಿ ಇಬ್ಬರು ಸೋದರರನ್ನು ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ್ದಾರೆ. ಘಟನೆ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ನಡೆದಿದೆ. ಹಫ್ತಾ ನೀಡಿಲ್ಲ ಎಂಬ ಕಾರಣಕ್ಕೆ ಅವರಿಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಮೃತರನ್ನು ಶ್ಯಾಮ್ ಸುಂದರ್ ಜೈಸ್ವಾಲ್ (55) ಹಾಗೂ ಶ್ಯಾಮ್ ಮೂರತ್ ಜೈಸ್ವಾಲ್ (48) ಎಂದು ಗುರುತಿಸಲಾಗಿದೆ. ಮೃತರ ಕಟುಂಬಗಳಿಗೆ ಮುಖ್ಯಮಂತ್ರಿ ಆದಿತ್ಯನಾಥ್ ತಲಾ ರೂ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕೊಲೆಗೀಡಾದ ಇಬ್ಬರು ಸೋದರರೂ ಕಟ್ಟಡ ನಿರ್ಮಾಣ ವಸ್ತುಗಳ ಉದ್ದಿಮೆ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಇಬ್ಬರಿಂದಲೂ ಹಣಕ್ಕೆ ಬೇಡಿಕೆಯಿರಿಸಿ ಹಲವಾರು ಕರೆಗಳು ಬಂದಿತ್ತೆಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಬಂಧ ಕೊಹಂದೌರ್ ಪೊಲೀಸ್ ಠಾಣಾಧಿಕಾರಿ ನಾಗೇಂದ್ರ ಸಿಂಗ್ ನಗರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತರುವಾಯ ಸೋದರರ ಕೊಲೆಯನ್ನು ಖಂಡಿಸಿ ಸ್ಥಳೀಯರು ಅಲಹಾಬಾದ್-ಫೈಝಾಬಾದ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರ ಸಮಸ್ಯೆ ಉದ್ಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News