ರಾಜೇಂದ್ರ ಅರಸ್‌ಗೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಹೈಕೋರ್ಟ್‌ಗೆ ಅರ್ಜಿ

Update: 2018-07-27 16:00 GMT

ಬೆಂಗಳೂರು, ಜು.27: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಕುಮಾರ್ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣದ ಎರಡನೆ ಆರೋಪಿಯಾದ ಬಿಜೆಪಿಯ ಬೆಂಗಳೂರು ನಗರ ಘಟಕದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ರಾಜೇಂದ್ರ ಅರಸ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ. ಸಾಕ್ಷನಾಶಕ್ಕೆ ಪ್ರಯತ್ನಿಸಿದ್ದಾರೆ. ತನಿಖೆಯ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಇವರು ಪ್ರಭಾವಿ ವ್ಯಕ್ತಿಯಾಗಿದ್ದು, ಅಧೀನ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ವಿಚಾರಣೆ ನಡೆಸಿದ್ದು, ಪ್ರತಿವಾದಿ ಆರೋಪಿ ರಾಜೇಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ವಿನಯ್ ಕುಮಾರ್ ಅವರನ್ನು ಅಪಹರಿಸಲು ಪ್ರಯತ್ನ ನಡೆಸಲಾಗಿತ್ತು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಬಳಿ ಗುಂಪೊಂದು ಅವರನ್ನು ಅಡ್ಡಗಟ್ಟಿ, ಅಪಹರಿಸಲು ಯತ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪ್ರಕರಣದ ಮೊದಲನೆ ಆರೋಪಿಯಾಗಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ಈಗಾಗಲೇ ಅಧೀನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದು ಪೂರಕ ದೋಷಾರೋಪಣಾ ವರದಿ ಸಿದ್ಧಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News