ಧರಂಸಿಂಗ್ ಪ್ರಸ್ತುತ ರಾಜಕಾರಣಕ್ಕೆ ಮಾದರಿ ವ್ಯಕ್ತಿ: ಸ್ಪೀಕರ್ ರಮೇಶ್‌ ಕುಮಾರ್

Update: 2018-07-27 17:15 GMT

ಬೆಂಗಳೂರು, ಜು.27: ರಾಜಕಾರಣ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಮೃದು ಸ್ವಭಾವದ ಧರಂಸಿಂಗ್ ಅವರ ಜೆಂಟಲ್‌ಮೆನ್ ನಿಲುವು ಸಕಲರಿಗೂ ಮಾದರಿ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಯ ಬಲವಿಲ್ಲದ ಸಣ್ಣ ಸಮುದಾಯ ಮತ್ತು ಸಾಮಾನ್ಯ ಬಡ ಕುಟುಂಬದಿಂದ ಬಂದ ಧರ್ಮಸಿಂಗ್ 'ಜೆಂಟಲ್ ಮೆನ್’ ರಾಜಕಾರಣಿಯಾಗಿದ್ದರೂ, ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗೂ ಒಳಗಾಗಿದ್ದರು. ಆದರೂ, ಅವುಗಳೆಲ್ಲವನ್ನೂ ಗಟ್ಟಿತನದಿಂದ ಎದುರಿಸಿ ಸೌಜನ್ಯತೆ ಮೆರೆದರು ಎಂದು ಬಣ್ಣಿಸಿದರು.

ರಾಜಕೀಯ ಕ್ಷೇತ್ರದಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಅಧಿಕಾರ ಎಂಬುದು ಜವಾಬ್ದಾರಿ ಇದ್ದಂತೆ ಎಂಬಂಶವನ್ನು ಮನವರಿಕೆ ಮಾಡಿಕೊಟ್ಟ ವ್ಯಕ್ತಿ. ಅಧಿಕಾರಕ್ಕೆ ಅಂಟಿಕೂರದೆಯೇ ಆತ್ಮಗೌರವದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ವ್ಯಕ್ತಿತ್ವ ಅವರದು. ಇಂತಹ ಧರ್ಮಸಿಂಗ್ ತಮ್ಮಲ್ಲಿನ ಮೃದುಧೋರಣೆಯಿಂದಾಗಿ ಪ್ರಸ್ತುತ ರಾಜಕಾರಣಕ್ಕೆ ಮಾದರಿ ವ್ಯಕ್ತಿ ಎಂದು ಸ್ಮರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ‘ಅಜಾತಶತ್ರು’ ಎನ್ನಿಸಿಕೊಳ್ಳುವುದು ಬಹಳ ಕಷ್ಟ. ಸ್ವಪಕ್ಷ, ಪ್ರತಿಪಕ್ಷ ಹಾಗೂ ಶತ್ರುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಧರಂಸಿಂಗ್ ಅಂಥವರಿಗೆ ಮಾತ್ರವೇ ಸಾಧ್ಯ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಆಂತರಿಕ ಭಿನ್ನಾಭಿಪ್ರಾಯ ಇದ್ದರೂ ಹೊರ ಪ್ರಪಂಚಕ್ಕೆ ಸದಾ ಇಬ್ಬರೂ ಜೊತೆಯಾಗಿ ಇರುತ್ತಿದ್ದದ್ದು ವಿಶೇಷ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಡಿ.ಕೆ.ಶಿವಕುಮಾರ್, ಪ್ರಿಯಾಂಕ ಖರ್ಗೆ, ಆರ್.ವಿ. ದೇಶಪಾಂಡೆ, ಕೃಷ್ಣಭೈರೇಗೌಡ, ರಾಜಶೇಖರ್ ಪಾಟೀಲ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿ ಹಲವಾರು ಶಾಸಕರು, ಸಚಿವರು, ಪ್ರಮುಖರು ಉಪಸ್ಥಿತರಿದ್ದರು.

ನನ್ನ ತಪ್ಪು ನಿರ್ಧಾರದಿಂದ ಧರಂಸಿಂಗ್ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ತದನಂತರ ಅವರ ಮನೆಗೆ ಹೋಗಿ ಕ್ಷಮೆ ಕೇಳಿದ್ದೆ. ಆಗ ಅವರು ನಿನಗೆ ಸಿಕ್ಕಿರುವ ಅವಕಾಶವನ್ನು ರಾಜ್ಯದ ಹಿತಕ್ಕಾಗಿ ಬಳಸಿಕೋ ಎಂದು ಹಾರೈಸಿದ್ದರು.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಧರಂಸಿಂಗ್ ಸಿಎಂ ಪಟ್ಟ ಕಳೆದುಕೊಳ್ಳಲು ನಾನು, ಎಸ್.ಎಂ. ಕೃಷ್ಣ ಕಾರಣ ಎಂಬ ಮಾತಿದೆ. ಆದರೆ, ಕುಮಾರಸ್ವಾಮಿ ಖುದ್ದು ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ನನ್ನ ಮೇಲಿನ ಆರೋಪದಿಂದ ಖುಲಾಸೆ ಆಗಿದ್ದೇನೆ.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News