ಬೆಂಗಳೂರು: ಕಾಂಗ್ರೆಸ್ ನಿಂದ ದಲಿತರಿಗೆ ಮೋಸ ಆರೋಪಿಸಿ ಧರಣಿ

Update: 2018-07-28 17:18 GMT

ಬೆಂಗಳೂರು, ಜು.28: ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿ ಕಾಂಗ್ರೆಸ್ ಪಕ್ಷವೂ ದಲಿತರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಧರಣಿ ನಡೆಸಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ನವ ಜಾಗೃತಿ ವೇದಿಕೆ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರಿಂದ ಕಾಂಗ್ರೆಸ್ ಆತುರವಾಗಿ ಯಾವುದೇ ಷರತ್ತುಗಳಿಲ್ಲದೆ ಜೆಡಿಎಸ್‌ಅನ್ನು ಬೆಂಬಲಿಸಿ, ದಲಿತರಿಗೆ ಸಿಎಂ ಸ್ಥಾನ ತಪ್ಪಿಸುವ ಉದ್ದೇಶದಿಂದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ದೂರಿದರು.

ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಜೆಡಿಎಸ್‌ಗೆ ಬೆಂಬಲ ನೀಡದೇ ಇದ್ದಿದ್ದರೆ ಬಿಜೆಪಿ ಜೊತೆ ಮೈತ್ರಿ ಸರಕಾರ ರಚನೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಾವು ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ. ಆದರೆ, ಈ ಬಾರಿ ದಲಿತ ನಾಯಕರೊಬ್ಬರನ್ನು ಸಿಎಂ ಆಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ, ಅನುಭವ, ದಕ್ಷತೆ, ಹಿರಿತನವುಳ್ಳ ನಾಯಕರಿದ್ದರು. ಉದ್ದೇಶಪೂರ್ವಕವಾಗಿ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಲು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲು ಕಾಂಗ್ರೆಸ್ ಆಸಕ್ತಿ ತೋರಿಸಲಿಲ್ಲ ಎಂದು ದೂರಿದರು.


ಶೇ.1 ರಷ್ಟು ಜನಸಂಖ್ಯೆಯುಳ್ಳ ಬ್ರಾಹ್ಮಣರಿಗೂ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆದರೆ, ಶೇ.24 ರಷ್ಟು ಜನಸಂಖ್ಯೆಯುಳ್ಳ ದಲಿತರಿಗೆ ಇದುವರೆಗೂ ಮುಖ್ಯಮಂತ್ರಿ ಸ್ಥಾನವನ್ನು ನೀಡಿಲ್ಲ. ಅರ್ಹ ಹಾಗೂ ದಕ್ಷ ನಾಯಕರಿದ್ದರೂ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ, ಪ್ರಜ್ಞಾವಂತರೆಲ್ಲರನ್ನೂ ಒಂದೆಡೆ ಸೇರಿಸಿ ದಲಿತ ವಿರೋಧಿ ಧೋರಣೆಯನ್ನು ಖಂಡಿಸುವ ಸಲುವಾಗಿ ಧರಣಿ ನಡೆಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News