ಹೆಡಿ ಲಾಮಾರ್ : ಸೌಂದರ್ಯ, ಕಲೆ ಮತ್ತು ವಿಜ್ಞಾನದ ಸಂಗಮ

Update: 2018-07-28 18:23 GMT

ಹೆಡಿ ಲಾಮಾರ್‌ಗೆ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದಿದ್ದರೂ ತನ್ನ ಸ್ವಂತ ಕಲಿಕೆಯ ಸಾಮರ್ಥ್ಯದಿಂದ ಕೆಲವು ಆವಿಷ್ಕಾರಗಳನ್ನು ಕೈಗೊಳ್ಳುತ್ತಾಳೆ. ಅವುಗಳಲ್ಲಿ ‘‘ಸುಧಾರಿತ ಟ್ರಾಫಿಕ್ ಸಿಗ್ನಲ್’’ಗಳು ಒಂದಾದರೆ, ಇನ್ನೊಂದು ತಂಪು ಪಾನೀಯ ತಯಾರಿಸುವ ಒಂದು ಮಾತ್ರೆ.

ಇವತ್ತಿನ (Wi-Fi, Bluetooth, GSM) ((Global System for Mobile Communication)), (GPS) ((Global Positioning System)) ಮುಂತಾದ ನಿಸ್ತಂತು ಸಂವಹನ ತಂತ್ರಜ್ಞಾನಗಳ ಆವಿಷ್ಕಾರಗಳ ಹಿಂದೆ ಒಬ್ಬ ಸಿನೆಮಾ ನಟಿ, ಸೌಂದರ್ಯವತಿ ಇದ್ದಾಳೆಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಅದು ನಿಜ.

ಇವತ್ತು ನೀವು ಸ್ಮಾರ್ಟ್ ಟಿ.ವಿ ಮುಂದೆ ಕುಳಿತು ಚಾನಲ್‌ಗಳನ್ನು ಬದಲಾಯಿಸುತ್ತಿರುತ್ತೀರಿ. ನೂರಾರು ಚಾನಲ್‌ಗಳು ಉಪಗ್ರಹಗಳ ಮೂಲಕ ನಿಮ್ಮ ಮನೆಗೆ ಬಿತ್ತರಗೊಳ್ಳುತ್ತಿರುತ್ತವೆ. ಆದರೆ ಯಾವ ಒಂದು ಚಾನಲ್ ಸಹ ಒಂದರ ಮೇಲೆ ಒಂದು ಸವಾರಿ ಮಾಡುವುದಿಲ್ಲ. (ಅಂದರೆ ಒಂದು ಚಾನಲ್‌ನ ಕಾರ್ಯಕ್ರಮ ಇನ್ನೊಂದು ಚಾನಲ್‌ನ ಮೇಲೆ ಪ್ರಭಾವ ಬೀರಿ ಎರಡು ಕಾರ್ಯಕ್ರಮಗಳು ಒಟ್ಟೊಟ್ಟಿಗೆ ಸೇರಿ ಗೊಂದಲವುಂಟಾಗುವಂತಹ ಸ್ಥಿತಿ ಇಲ್ಲದಿರುವುದು. ಈ ತರಹದ ಸ್ಥಿತಿ ಕೆಲವೊಮ್ಮೆ ನೀವು ರೇಡಿಯೋ ಕಾರ್ಯಕ್ರಮಗಳಲ್ಲಿ ಕೇಳುತ್ತಿರುತ್ತೀರಿ). ಕೆಲವೊಮ್ಮೆ ಮೊಬೈಲ್ ಫೋನ್‌ನಿಂದ ಕಾರ್ಯಕ್ರಮಗಳನ್ನು ಟಿ.ವಿಗೆ ಹೊಂದಿಸಿಕೊಂಡು ನೋಡುತ್ತಿರುತ್ತೀರಿ. ಇವೆಲ್ಲಾ ಸಾಧ್ಯತೆಗಳು ಈ (2G, 3G, GPS, GSM, Wi-Fi, Bluetooth) ತಂತ್ರಜ್ಞಾನಗಳಿಂದ. ಅವುಗಳ ಮೂಲ ತಂತ್ರಜ್ಞಾನವೇ (Frequency Hopping Spread Spectrum (FHSS)).

ಮೊದಲಿಗೆ (FHSS) ((Electronic Signals)) ಬಗ್ಗೆ ತಿಳಿಯೋಣ. ನಮ್ಮ ಎಲ್ಲಾ ಬಾನುಲಿ, ದೂರದರ್ಶನ ಹಾಗೂ ಮೊಬೈಲ್ ಸಂವಹನ ಸಂಪರ್ಕಗಳೆಲ್ಲವೂ ವಿದ್ಯುನ್ಮಾನ ಸನ್ನೆ ಗಳಿಂದ ನಡೆಯುತ್ತವೆ. ಇವೆಲ್ಲ ಒಂದು ಕಡೆಯಿಂದ ಮತ್ತೊಂದು ಕಡೆಗೆ ತರಂಗಗಳ ರೂಪದಲ್ಲಿ ಸಾಗುತ್ತಿರುತ್ತವೆ. ಈ ತರಂಗಗಳಿಗೆ ಅದರದೇ ಆದ ಆವರ್ತನ ((frequency)) ವಿರುತ್ತದೆ. ಬಾನುಲಿಯದ್ದಾಗಲಿ, ದೂರದರ್ಶನದ್ದಾಗಲಿ ಒಂದೊಂದು ಚಾನಲ್ ಅದರದ್ದೇ ಆದ ತರಂಗಾಂತರವನ್ನು ಹಾಗೂ ಆವರ್ತನವನ್ನು ಹೊಂದಿರುತ್ತದೆ. ಈ ಮೊದಲು ನೀವು ಗುರುತಿಸಿದ ಹಾಗೆ ಒಂದು ಕಾರ್ಯಕ್ರಮದ ಚಾನಲ್‌ನಲ್ಲಿ ಇನ್ನೊಂದು ಕಾರ್ಯಕ್ರಮವು ಮಧ್ಯೆ ಮಧ್ಯೆ ಕೂಡಿಕೊಳ್ಳುವುದನ್ನು ಗಮನಿಸಿರುತ್ತೀರಿ. ಇವು ತರಂಗಗಳ ಕೂಡುವಿಕೆಯಿಂದ ಆದ ಪರಿಣಾಮಗಳು. ಇದು ಇನ್ನು ಮಿಲಿಟರಿ ಅವಶ್ಯಕತೆಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಕೇತಗಳ ಮುಖಾಂತರ ಸಂದೇಶಗಳನ್ನು ರವಾನೆ ಮಾಡುವಾಗ ಈ ರೀತಿಯ ಅಲೆಕೂಡುವಿಕೆಯ ತಂತ್ರಜ್ಞಾನದಿಂದ ಶತ್ರುಗಳು ನಮ್ಮ ಸಂದೇಶಗಳನ್ನು ತಡೆಯಬಹುದು ಇಲ್ಲಾ ತಿಳಿದು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ಅನನುಕೂಲಗಳ ನಿವಾರಣೆಗೆ ಬಂದ ಆವಿಷ್ಕಾರವೇ ಈ (FHSS). ಈ ತಂತ್ರಜ್ಞಾನದಲ್ಲಿ ಒಂದು ಸಂದೇಶ ಅಥವಾ ಕಾರ್ಯಕ್ರಮಕ್ಕೆ ಒಂದು ತರಂಗಗುಚ್ಛವನ್ನು ಅಳವಡಿಸುವುದು. ಆ ತರಂಗಗುಚ್ಛವನ್ನು ವಿವಿಧ ಆವರ್ತನಗಳನ್ನಾಗಿ ವಿಭಾಗಿಸುವುದು. ಸಂದೇಶವನ್ನು ಒಂದೇ ಆವರ್ತನದಲ್ಲಿ ರವಾನಿಸುವ ಬದಲು ಪದೇ ಪದೇ ಆವರ್ತನವನ್ನು ಬದಲಿಸಿ ರವಾನಿಸುವುದು. ಇದರಲ್ಲಿ ಈ ಆವರ್ತನ ಬದಲಾವಣೆ ಅದರದ್ದೇ ಆದ ಇಚ್ಛೆಗನುಸಾರವಾಗಿ ನಡೆಯುತ್ತಿರುತ್ತದೆ. ಈ ಬದಲಾವಣೆಗಳ ಸೂಕ್ಷ್ಮ ಸಂಕೇತಗಳು ಕಳುಹಿಸುವ ಮತ್ತು ಸ್ವೀಕರಿಸುವ ಯಂತ್ರಗಳಿಗಷ್ಟೇ ತಿಳಿದಿರುವುದಾಗಿರುತ್ತವೆ. ಇದರಿಂದ ಮೂರನೇ ವ್ಯಕ್ತಿಯ ಇಣುಕುವಿಕೆಯ ಸಾಧ್ಯತೆ ಕಡಿಮೆಯಿದ್ದು ಸಂದೇಶ, ಸಂಕೇತ ಕಾರ್ಯಕ್ರಮಗಳು ಅಡೆತಡೆ ಯಿಲ್ಲದೆ ಬಿತ್ತರವಾಗುತ್ತವೆ ಮತ್ತು ಸುರಕ್ಷತೆ ಯನ್ನು ಕಾಪಾಡಿಕೊಂಡಿರುತ್ತವೆ. ಇದಕ್ಕಾಗಿಯೇ ಈ ತಂತ್ರಜ್ಞಾನವನ್ನು (Frequency Hopping Spread Spectrum(FHSS)) ಆವರ್ತನ ಕುಪ್ಪಳಿಕೆಯ ಹರಡಿದ ತರಂಗಗುಚ್ಛ ವೆಂದು ಕರೆಯುವುದು. ಇದರ ಉಪ ವಿಭಾಗಗಳೇ (Bluetooth, Wi-Fi, GSM) ತಂತ್ರಜ್ಞಾನಗಳು.

ಇನ್ನು ಇದರ ಆವಿಷ್ಕಾರದ ವಿಷಯಕ್ಕೆ ಬರೋಣ. ಮೊದಲೇ ಹೇಳಿದಂತೆ ಇದು ನಟಿಯೊಬ್ಬಳ ಕೊಡುಗೆ. ((HedyLamarr))ಅವಳ ಹೆಸರು ಹೆಡಿ ಲಾಮಾರ್ . ಅವಳ ವ್ಯಕ್ತಿಚಿತ್ರವನ್ನು ಅರಿಯುತ್ತಲೇ ಅವಳ ಸಾಧನೆಗಳನ್ನು ತಿಳಿಯೋಣ. ಹೆಡಿ ಲಾಮಾರ್ ಮೂಲತಃ ಆಸ್ಟ್ರಿಯಾ ಮೂಲದ ಅಮೆರಿಕದ ನಟಿ. ಅವಳ ಮೊದಲ ಹೆಸರು ಹೆಡ್ವಿಗ್ ಇವಾ ಮರಿಯಾ ಕೀಸ್ಲೆರ್ ((Hedwig Eva Maria Kiesler)).

 1913ರ ನವೆಂಬರ್ 9ರಂದು ಆಸ್ಟ್ರಿಯಾ- ಹಂಗೇರಿಯ ವಿಯೆನ್ನಾದಲ್ಲಿ ಉತ್ತಮ ತರಗತಿಯ ಯಹೂದಿ ಕುಟುಂಬದ ಗೆರ್ಟ್ರೂಡ್ಕೀಸ್ಲೆರ್ - ಎಮಿಲ್ ಕೀಸ್ಲೆರ್ ದಂಪತಿಗೆ ಒಬ್ಬಳೇ ಮಗಳಾಗಿ ಜನಿಸಿದಳು. ಅಪ್ಪ ಗೆರ್ಟ್ರೂಡ್ ಬ್ಯಾಂಕ್ ಒಂದರ ಯಶಸ್ವೀ ನಿರ್ದೇಶಕ. ಅಮ್ಮ ಎಮಿಲ್ ಒಬ್ಬ ಪಿಯಾನಿಸ್ಟ್. ಅಮ್ಮ ಮುಂದೆ ಕ್ಯಾಥೊಲಿಕ್ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ ಮಗಳನ್ನೂ ಕ್ರೈಸ್ತಳನ್ನಾಗಿ ಬೆಳೆಸಿದಳು. 1920 ರ ದಶಕದ ಕೊನೆಯಲ್ಲಿ ಆಸ್ಟ್ರಿಯಾದ ನಿರ್ದೇಶಕ ನೋರ್ವನಿಂದ ಹದಿಹರೆಯದ ನಟಿಯಾಗಿ ಗುರುತಿಸಿಕೊಂಡ ಹೆಡ್ವಿಗ್, ಬರ್ಲಿನ್ ನಗರಕ್ಕೆ ಬಂದು ನಾಟಕ ಕಲೆಯಲ್ಲಿ ತರಬೇತಿಯನ್ನು ಪಡೆದು ಮತ್ತೆ ಸಿನೆಮಾರಂಗದಲ್ಲಿ ತೊಡಗಿಸಿಕೊಳ್ಳಲು ವಿಯೆನ್ನಾಗೆ ಹಿಂದಿರುಗುತ್ತಾಳೆ. ಅಲ್ಲಿ ಮೊದಲಿಗೆ ಚಿತ್ರಕತೆ ಬರೆಯುವ ಕೆಲಸ ಕೈಗೊಂಡರೂ ನಂತರ ನಟಿಯಾಗಿ ಗುರುತಿಸಿ ಕೊಳ್ಳುತ್ತಾಳೆ. 1930, 1931ರಲ್ಲಿ ಒಂದೆರಡು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹೆಡ್ವಿಗ್, 1932 ರಲ್ಲಿ ತೆರೆಕಂಡ (No Money Needed) ಎಂಬ ಹಾಸ್ಯಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ತದನಂತರ ಅವಳು ಅಂತರ್‌ರಾಷ್ಟ್ರೀಯ ಮಟ್ಟದ ನಟಿಯಾಗಿ ಗುರುತಿಸಿಕೊಳ್ಳುತ್ತಾಳೆ. ಅವಳಿಗೆ ಮುಖ್ಯ ತಿರುವು ಕೊಟ್ಟ ಚಿತ್ರವೆಂದರೆ 1933ರಲ್ಲಿ ತಯಾರಾದ ಜೆಕ್ ಭಾಷೆಯ (Ecstasy) ಎಂಬ ಚಲನಚಿತ್ರ. ಅದರಲ್ಲಿ ವೃದ್ಧ ಪತಿಯಿಂದ ನಿರ್ಲಕ್ಷ್ಯಕ್ಕೊಳಪಡುವ ಯುವಪತ್ನಿಯಾಗಿ ನಟಿಸಿದ ಹೆಡ್ವಿಗ್‌ಳ ಕೆಲವು ನಗ್ನ ದೃಶ್ಯಗಳು (ಡ್ಯೂಪ್ ಮತ್ತು (Telelens) ಬಳಸಿರುವ ಸಾಧ್ಯತೆ ಇದೆ ಎಂಬ ವಾದವಿದೆ) ವಿವಾದಕ್ಕೀಡಾಗುತ್ತವೆ. ಈ ಚಿತ್ರ ರೋಮ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದರೂ ಅಮೆರಿಕ ಮತ್ತು ಜರ್ಮನಿಯ ಸಂಪ್ರದಾಯ ವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಅಲ್ಲಿ ನಿಷೇಧಿಸಲ್ಪಡುತ್ತದೆ. ಇದರಿಂದ ಹೆಡ್ವಿಗ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾಳೆ.

ಜೊತೆಗೆ ನಾಟಕಗಳಲ್ಲಿನ ನಟನೆಯನ್ನು ಮುಂದುವರಿಸುವ ಹೆಡ್ವಿಗ್, ಆಸ್ಟ್ರಿಯಾದ ಮಹಾರಾಣಿ ಎಲಿಝಬೆತ್ ಜೀವನಾಧಾರಿತ ನಾಟಕದ ‘‘ಸಿಸಿ((Sissy))’’ಪಾತ್ರಕ್ಕೆ ವಿಮರ್ಶಕರಿಂದ ಪ್ರಶಂಸೆಯನ್ನು ಮತ್ತು ಅಭಿನಂದನೆಗಳ ಮಹಾಪೂರವನ್ನೇ ಪಡೆಯುತ್ತಾಳೆ. ಅವಳ ಸೌಂದರ್ಯ ಮತ್ತು ಅಭಿನಯಕ್ಕೆ ಮಾರುಹೋದ ಅಭಿಮಾನಿಗಳು ಪ್ರತಿ ಪ್ರದರ್ಶನದ ನಂತರ ಅವಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಬರುತ್ತಿರುತ್ತಾರೆ. ಅಂತಹವರನ್ನು ಎಷ್ಟೋ ಬಾರಿ ಹಿಂದಿರುಗಿಸಿ ಕಳುಹಿಸಿರುತ್ತಾಳೆ. ಈ ರೀತಿ ಎಡೆಬಿಡದೆ ಭೇಟಿಗೆ ಹಾತೊರೆದು ಬಂದ ಆಸ್ಟ್ರಿಯಾದ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳ ವ್ಯಾಪಾರಿ ಫ್ರೆಡರಿಕ್ ಮಂಡ್ಲ್ ಅವಳನ್ನು ಭೇಟಿಮಾಡುತ್ತಾನೆ. ಆಸ್ಟ್ರಿಯಾದ ಮೂರನೇ ಅತಿದೊಡ್ಡ ಶ್ರೀಮಂತನಾದ ಅವನ ವರ್ಚಸ್ಸಿಗೆ ಮುಖ್ಯವಾಗಿ ಶ್ರೀಮಂತಿಕೆಗೆ ಮನಸೋತ ಹೆಡ್ವಿಗ್ ಅವನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ. ಇದಕ್ಕೆ ಯಹೂದಿ ಹಿನ್ನೆಲೆಯ ಅಪ್ಪ ಅಮ್ಮನ ವಿರೋಧವಿರುತ್ತದೆ. ಕಾರಣ ಅವನಿಗೆ ಇಟಲಿಯ ನಿರಂಕುಶ ಪ್ರಭು ಬೆನಟೊಲಿ ಮುಸ್ಸೊಲಿನಿ ಮತ್ತು ಜರ್ಮನಿಯ ಅಡಾಲ್ಫ್ ಹಿಟ್ಲರ್ ಸಂಪರ್ಕವಿದ್ದು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುತ್ತಾನೆ. ಆದರೂ ಅವರಿಗೆ ಮಗಳನ್ನು ತಡೆಯಲಾಗುವುದಿಲ್ಲ. ಮುಂದೆ ಈ ಮದುವೆಯ ಸಂಬಂಧ ಅಮ್ಮನನ್ನು ನಾಜಿ ಪಡೆಗಳಿಂದ ರಕ್ಷಿಸಿ ದೇಶದಿಂದ ಹೊರತರಲು ಸಹಾಯವಾಗುತ್ತದೆ.

1933ರ ಆಗಸ್ಟ್ 10ರಂದು ಮದುವೆಯಾದ ಹೆಡ್ವಿಗ್, ಅವಳೇ ಹೇಳುವಂತೆ ಫ್ರೆಡರಿಕ್ ಅವಳನ್ನು ಅತ್ಯಂತ ಹತೋಟಿಯಲ್ಲಿದ್ದ. ಅವಳ ಹಿಂದಿನ ಚಿತ್ರ (Ecstasy) ಯ ಪಾತ್ರವನ್ನೇ ಉದಾಹರಿಸುತ್ತಾ ಅವಳ ಅಭಿನಯಕ್ಕೆ ಕಡಿವಾಣವನ್ನು ಹಾಕುತ್ತಿದ್ದ. ಹೆಡ್ವಿಗ್ ಹೇಳಿಕೊಳ್ಳುವ ಹಾಗೆ ಫ್ರೆಡರಿಕ್‌ಇಟಾಲಿಯನ್ ಮತ್ತುಜರ್ಮನಿಯ ಸರಕಾರಗಳಿಗೆ ಶಸ್ತ್ರಾಸ್ತಗಳನ್ನು ಪೂರೈಸುವುದರಿಂದ ಆ ಎರಡೂ ದೇಶಗಳ ಸರ್ವಾಧಿಕಾರಿಗಳು ಕೆಲವೊಮ್ಮೆ ಇವರ ಮನೆಯ ಔತಣಕೂಟದಲ್ಲಿ ಭಾಗವಹಿಸುತ್ತಿರುತ್ತಾರೆ. ಫ್ರೆಡರಿಕ್ ಹೋಗುವ ವ್ಯವಹಾರಗಳ ಸಭೆಗಳಿಗೆ ಫ್ರೆಡರಿಕ್ ಹೆಡ್ವಿಗ್‌ಳನ್ನು ಸಹ ಕರೆದೊಯ್ಯುತ್ತಿರುತ್ತಾನೆ. ಆ ಸಭೆ, ಸಮ್ಮೇಳನಗಳಲ್ಲಿ ಅನೇಕ ವಿಜ್ಞಾನಿಗಳೂ ಸಹ ಭಾಗವಹಿಸುತ್ತಿರುತ್ತಾರೆ. ಅಲ್ಲಿ ನಡೆಯುತ್ತಿದ್ದ ಮಿಲಿಟರಿ ತಂತ್ರಜ್ಞಾನದ ವಿಚಾರ ಸಂಕಿರಣಗಳು ಹೆಡ್ವಿಗ್‌ಳನ್ನು ಆನ್ವಯಿಕ ವಿಜ್ಞಾನಕ್ಕೆ ಪರಿಚಯಿಸುವ ವೇದಿಕೆಯಾಗುತ್ತದೆ ಮತ್ತು ಅವಳ ಸುಪ್ತ ಪ್ರತಿಭೆಗೆ ನೀರೆರೆಯುತ್ತವೆ. ಮುಂದೆ ಅವಳು ಆವಿಷ್ಕರಿಸುವ ತಂತ್ರಜ್ಞಾನಕ್ಕೆ ಇವುಗಳು ಅಡಿಗಲ್ಲಾಗಿರುತ್ತವೆ. ಇಷ್ಟಿದ್ದರೂ ಅವಳ ಕಲಾರಾಧನೆಗೆ ಫ್ರೆಡರಿಕ್ ನೊಡನಿರುವ ಸಂಸಾರ ಬಂಧನ ನಿಜವಾಗಿಯೂ ಸೆರೆಮನೆಯಾಗಿರುತ್ತದೆ. ಅವಳು ಆತ್ಮಕತೆಯಲ್ಲಿ ಹೇಳಿರುವಂತೆ ‘‘ಶೀಘ್ರದಲ್ಲೇ ಮನವರಿಕೆಯಾಯಿತು. ನಾನೊಬ್ಬ ನಟಿಯಾಗಿ ಮುಂದುವರಿಯಲಾರೆ. ಫ್ರೆಡರಿಕ್ ಸಂಸಾರದಲ್ಲಿ ಸಾಮ್ರಾಟನಿದ್ದಂತೆ. ನಾನೊಂದು ಆಲಂಕಾರಿಕ ವಸ್ತು, ಇಲ್ಲಾ ಸದಾ ಕಾಯಲ್ಪಡುವ ಜೀವಭಾವವಿಲ್ಲದ ಗೊಂಬೆ ಇದ್ದಂತೆ. ಅದಕ್ಕಾಗಿಯೇ ವೇಷ ಮರೆಸಿಕೊಂಡು ಸಂಸಾರ ಮತ್ತು ದೇಶಬಿಟ್ಟು ಪ್ಯಾರಿಸ್ ಸೇರಿದೆ’’.

ಹೀಗೆ 1937ರಲ್ಲಿ ಆಸ್ಟ್ರಿಯಾದಿಂದ ಪ್ಯಾರಿಸ್, ಅಲ್ಲಿಂದ ಲಂಡನ್ ಸೇರುವ ಹೆಡ್ವಿಗ್ ಖ್ಯಾತ ಚಲನಚಿತ್ರ ನಿರ್ಮಾಣಸಂಸ್ಥೆ (MGM(Metro-Goldwyn-Mayer)) ಯ ಮುಖ್ಯಸ್ಥ ಲೂಯಿಸ್ ಬಿ. ಮೇಯರ್ ನನ್ನು ಭೇಟಿಯಾಗುತ್ತಾಳೆ. ಅವನೂ ಸಹ ಯೂರೋಪಿನಲ್ಲಿಹೊಸ ಪ್ರತಿಭೆಗಳ ಹುಡುಕಾಟದಲ್ಲಿರುತ್ತಾನೆ. ಹೀಗೆ ಕಾಕತಾಳೀಯ ಸಂದರ್ಭ ಅವಳನ್ನು ಮತ್ತೆ ಚಿತ್ರರಂಗಕ್ಕೆ ಕರೆತರುತ್ತದೆ. ಮೇಯರ್ ಹೆಡ್ವಿಗ್ ತನ್ನ ಹೆಸರನ್ನು‘‘ಹೆಡ್ವಿಗ್ ಇವಾ ಮರಿಯಾ ಕ್ಲೀಸರ್’’ನಿಂದ ‘‘ಹೆಡಿ ಲಾಮಾರ್’’ ಎಂದು ಬದಲಿಸಿಕೊಳ್ಳಲು ಒಲಿಸುತ್ತಾನೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳು. ಮೊದಲನೆಯದು 1933ರ (Ecstasy) ಚಿತ್ರದಲ್ಲಿ ದೊರಕಿದ ಋಣಾತ್ಮಕ ಖ್ಯಾತಿಯನ್ನು ಬದಲಿಸಲು. ಎರಡನೆಯದಾಗಿ ಅಂದಿನ ಕಾಲದ ಮೂಕಿಚಿತ್ರಗಳ ನಾಯಕಿ, ಸೌಂದರ್ಯವತಿ ದಿವಂಗತ ‘‘ಬಾರ್ಬರ ಲಾ ಮಾರ್’’ಳಿಗೆ ಗೌರವಸಲ್ಲಿಸುವ ಸಲುವಾಗಿ ಅವಳ ಹೆಸರಿನ ಲಾವಾರ್ ಉಪನಾಮವನ್ನು ತೆಗೆದುಕೊಳ್ಳುವುದಾಗಿತ್ತು. ಹೀಗೆ ಹೆಡಿ ಲಾಮಾರ್ 1938ರಲ್ಲಿ ಹಾಲಿವುಡ್ ಚಿತ್ರರಂಗಕ್ಕೆ ಪ್ರವೇಶಪಡೆಯುತ್ತಾಳೆ. ಲೂಯಿಸ್ ಮೇಯರ್ ಅವಳನ್ನು ಪ್ರಪಂಚದ ಅತಿ ಸುಂದರ ಮಹಿಳೆಯೆಂದೇ ಪ್ರಚಾರಪಡಿಸುತ್ತಾನೆ. ಅದೇ ವರ್ಷ ಅಲ್ಜೀರ್ಸ್((Algiers)) ಎಂಬ ಚಿತ್ರದಲ್ಲಿ ನಟಿಸುವ ಹೆಡಿ ಲಾಮಾರ್ ಹಾಲಿವುಡ್‌ನಲ್ಲಿ ಅಪರಿಚಿತಳಾದರೂ ತನಗೆ ಸಿಕ್ಕ ಆಸ್ಟ್ರಿಯನ್ ಅಸ್ಮಿತೆ ಮತ್ತು ಅತಿ ಸೌಂದರ್ಯವತಿ ನಟಿ ಎಂಬ ಪ್ರಚಾರದಿಂದ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿರುತ್ತಾಳೆ. ಸಿನೆಮಾ ಬಿಡುಗಡೆಯಾದಾಗ ನಿರೀಕ್ಷೆ ಸುಳ್ಳಾಗಿರುವುದಿಲ್ಲ. ಬೆಳ್ಳಿತೆರೆಯ ಮೇಲೆ ಅವಳ ಸೌಂದರ್ಯ ಕಂಡು ಮೂಕವಿಸ್ಮಿತರಾಗುತ್ತಾರೆ. ಪ್ರೇಕ್ಷಕರ ಮಾತುಗಳಲ್ಲೇ ಕೇಳುವುದಾದರೆ. ("when her face first appeared on the screen, everyone gasped...Lamarr's beauty literally took one's breath away") ಎನ್ನುವ ಮಾತು ಅವಳ ಖ್ಯಾತಿಯನ್ನು ಪರಿಚಯಿಸುತ್ತದೆ.

MGM ಇದಕ್ಕೆ ಪೂರಕವಾಗಿ 1939ರಲ್ಲಿ ಅವಳಿಗೆ 1938ರ ಹೊಸ ಪ್ರತಿಭೆಯ ಪ್ರಶಸ್ತಿಯೂ ದೊರಕುತ್ತದೆ. ಹೆಡಿ ಲಾಮಾರ್‌ನ ಸಿನೆಮಾಯಾನ 1945 ರ ತನಕ ಸಹಯೋಗದಲ್ಲಿ ಕೆಲವು ಏಳು ಬೀಳುಗಳೊಂದಿಗೆ ಯಶಸ್ವಿಯಾಗಿ ಸಾಗುತ್ತದೆ.

 ಅವಳ ಸಿನೆಮಾಗಳಲ್ಲಿ ಮುಖ್ಯವಾದದ್ದು: (I Take This Woman, Lady of the Tropics, Boom Town, comrade X, Ninotchka, Come Live with Me, H M Pulham Esq. , Ziegfled Girl, Tortilla Flat,Samson and Delilah, Cross Roads, The HeavenlyBody, The Conspirators, Experiment Perilous Her Highness and Bellboy). ಮತ್ತು ಈ ಚಿತ್ರಗಳೆಲ್ಲವೂ ಹೆಡಿ ಲಾಮಾರ್ ಳನ್ನು ಕೀರ್ತಿಶಿಖರಕ್ಕೇರಿಸಿದವು. ಇದರ ಜೊತೆಗೆ (MGM)

ಜೊತೆಗೂಡಿ ಒಂದೆರಡು ಚಿತ್ರಗಳನ್ನು ನಿರ್ಮಿಸುತ್ತಾಳೆ. ಅವುಗಳು (The strange Woman, Dishonored lady) ಮತ್ತು (Let's Live a Little.) ಅವಳ ಚಿತ್ರಗಳ ಶೀರ್ಷಿಕೆಗಳನ್ನೇ ನೋಡಿದರೆ ಸಾಕು ಸಿನೆಮಾ ರಂಗದಲ್ಲಿ ಅವಳ ಘನತೆ ಮತ್ತು ಕೀರ್ತಿ ಎಷ್ಟಿತ್ತೆಂಬುದು ತಿಳಿಯುತ್ತದೆ. 1951ರಲ್ಲಿ (Samson and Delilah)

ಚಿತ್ರಕ್ಕೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಪಡೆಯುತ್ತಾಳೆ. ಆದರೆ ಸಿನೆಮಾದಾಚೆಗಿನ ಅವಳ ವೈಯಕ್ತಿಕ ಬದುಕು ಬೇರೆಯದೇ ಆಗಿರುತ್ತದೆ. ಒಟ್ಟು ಆರು ಮದುವೆ, ಮೂವರು ಮಕ್ಕಳಿದ್ದರೂ ಆದಷ್ಟು ಒಂಟಿ ಜೀವನವನ್ನೇ ಅನುಭವಿಸುತ್ತಿರುತ್ತಾಳೆ. ಆದರೂ ತನ್ನ ವಿರಾಮ ಸಮಯವನ್ನು ತನ್ನ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೆಚ್ಚು ಕ್ರಿಯಾಶೀಲವಾಗಿರುತ್ತಾಳೆ. ಅವಳಿಗೆ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದಿದ್ದರೂ ತನ್ನ ಸ್ವಂತ ಕಲಿಕೆಯ ಸಾಮರ್ಥ್ಯದಿಂದ ಕೆಲವು ಆವಿಷ್ಕಾರಗಳನ್ನು ಕೈಗೊಳ್ಳುತ್ತಾಳೆ. ಅವುಗಳಲ್ಲಿ ‘‘ಸುಧಾರಿತ ಟ್ರಾಫಿಕ್ ಸಿಗ್ನಲ್’’ ಗಳು ಒಂದಾದರೆ, ಇನ್ನೊಂದು ತಂಪು ಪಾನೀಯ ತಯಾರಿಸುವ ಒಂದು ಮಾತ್ರೆ. ಹೆಡಿ ಲಾಮಾರ್ ಬರೆದುಕೊಳ್ಳುವ ಹಾಗೆ ಅವಳ ಕ್ರಿಯಾಶೀಲತೆಗೆ ನೀರೆರೆದವರಲ್ಲಿ ಮುಖ್ಯವಾಗಿ ಅಂದಿನ ವಿಮಾನ ತಂತ್ರಜ್ಞಾನದ ನಿಪುಣರಾದ ಹೊವರ್ಡ್ ಹೂಗ್ಸ್ ((Howard Hughes)). ಅವರನ್ನು ಭೇಟಿಯಾದಾಗಲೆಲ್ಲಾ, ಹೂಗ್ಸ್ ಅವಳ ಕ್ರಿಯಾಶೀಲತೆಯ ಹವ್ಯಾಸವನ್ನು ಕೆಣಕಿ ತನ್ನ ಇಂಜಿನಿಯರ್ ಸಹೊದ್ಯೋಗಿಗಳನ್ನು ಅವಳ ಪ್ರಯೋಗಗಳಿಗೆ ಸಹಾಯಮಾಡಲು ತೊಡಗಿಸುತ್ತಿದ್ದರು.

ಇದರಿಂದಲೇ ಅವಳಿಗೆ ಕೀರ್ತಿತಂದು ಕೊಟ್ಟ ವಿದ್ಯುನ್ಮಾನ ತಂತ್ರಜ್ಞಾನದ (FHSS) ಆವಿಷ್ಕಾರ ಸಾಧ್ಯವಾದದ್ದು. ಎರಡನೇ ಮಹಾಯುದ್ಧ ಕಾಲದಲ್ಲಿ ರೇಡಿಯೋ ನಿಯಂತ್ರಿತ ಕ್ಷಿಪಣಿ ತಂತ್ರಜ್ಞಾನ ಮುಂಚೂಣಿಯಲ್ಲಿತ್ತು. ಆದರೆ ಅಲ್ಲಿ ಬಳಸುವ ರೇಡಿಯೋ ತರಂಗಗಳಿಗೆ ಮೂರನೇ ವ್ಯಕ್ತಿ ತಡೆಯೊಡ್ಡುವ ((jamming)) ಅವಕಾಶವನ್ನು ಅರಿತ ಹೆಡಿ ಲಾಮಾರ್ ಅದರ ನಿವಾರಣೆಗೆ (ಅಮೆರಿಕದ (Allied Forces) ಪರವಾಗಿ ಹಾಗೂ ನಾಜಿಪಡೆಯ (Axis-Power) ವಿರುದ್ಧವಾಗಿ) ಹೊಸ ತಂತ್ರಜ್ಞಾನವನ್ನು ಮತ್ತು ಅದಕ್ಕಾಗಿ ಉಪಕರಣವೊಂದನ್ನು ತಯಾರಿಸಲು ಮುಂದಾದಳು. ಅದಕ್ಕಾಗಿ ತನ್ನ ಗೆಳೆಯ ಸಂಗೀತ ಸಂಯೋಜಕ ಹಾಗೂ ಪಿಯಾನೋ ವಾದಕ ಜಾರ್ಜ್ ಅಂಥೀಲ್((George Antheil)) ಸಹಾಯವನ್ನು ಕೋರುತ್ತಾಳೆ. ಅಂಥೀಲ್ ಮಾತುಗಳಲ್ಲೇ ಹೇಳುವುದಾದರೆ, ‘‘1940ರ ಬೇಸಿಗೆಯಲ್ಲಿ ನಾವು ಯುದ್ಧದ ವಿಷಯವನ್ನು ಮಾತನಾಡಲು ಪ್ರಾರಂಭಿಸಿದೆವು. ಎಲ್ಲೆಲ್ಲೂ ಯುದ್ಧದ ಕಾರ್ಮೋಡ. ಹೆಡಿ ಲಾಮಾರ್ ಗೆ ಸುಮ್ಮನೆ ಕೂರಲಾಗುತ್ತಿರಲಿಲ್ಲ. ಹೆಡಿ ಲಾಮಾರ್ ಗೆ ಯುದ್ಧದ ಈ ಸಂದರ್ಭದಲ್ಲಿ ಸುಮ್ಮನೆ ಹಾಲಿವುಡ್‌ನಲ್ಲಿ ಕೂತು ಹಣಮಾಡುವುದು ಸರಿಕಾಣುತ್ತಿರಲಿಲ್ಲ. ಅವಳಿಗೆ ಯುದ್ಧಸಾಮಗ್ರಿಗಳ ಮತ್ತು ಕೆಲವು ರಹಸ್ಯ ಆಯುಧಗಳ ವ್ಯವಹಾರದ ಅರಿವಿತ್ತು. ಆದ್ದರಿಂದ ಅವಳು (MGM) ಸಂಸ್ಥೆ ಬಿಟ್ಟು ವಾಶಿಂಗ್ಟನ್ ಗೆ ಹೋಗಿ (National Inventors Council)  ನಲ್ಲಿ ಸೇವೆ ಸಲ್ಲಿಸುವ ಇಚ್ಛೆಯಿತ್ತು.’’ ಆದರೆ (National Inventors (Council) ((War Fund))ಅವಳನ್ನು ತನ್ನ ಸಂಸ್ಥೆಗೆ ಸೇರಿಸಿಕೊಳ್ಳುವ ಬದಲು, ಅವಳ ಜನಪ್ರಿಯತೆಯನ್ನು ಉಪಯೋಗಿಸಿಕೊಂಡು ಯುದ್ಧ ದೇಣಿಗೆ ಯನ್ನು ಸಂಗ್ರಹಿಸಲು ಕೇಳಿಕೊಳ್ಳುತ್ತಾರೆ. ಅದರಂತೆ ಹೆಡಿ ಲಾಮಾರ್ ಪ್ರದರ್ಶನಗಳನ್ನು ನೀಡಿ ಯುದ್ಧ ದೇಣಿಗೆಯನ್ನು ಸಂಗ್ರಹಿಸಿಕೊಡುತ್ತಾಳೆ.

ಈ ಎಲ್ಲಾ ಬೆಳವಣಿಗೆಯಿಂದ ಅಂಥೀಲ್ ಹೆಡಿಯ ಆಶಯಕ್ಕೆ ಮೇಳೈಸುವ ಪಿಯಾನೋ ಮಾದರಿಯ ಸಣ್ಣ ಉಪಕರಣವೊಂದನ್ನು ಸಿದ್ಧಪಡಿಸುತ್ತಾನೆ. ಇದರ ಆಧಾರದ ಮೇಲೆ ಅವರು (FHSS) ನ ವಿನ್ಯಾಸವನ್ನು ಸಿದ್ಧಪಡಿಸಿ 1942ರ ಆಗಸ್ಟ್ 11ರಂದು ಪೇಟೆಂಟ್(ಹಕ್ಕು ಸಾಮ್ಯ) ಪಡೆಯುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ನಾವಿಕಪಡೆಗಳ ಕ್ಷಿಪಣಿಗಳನ್ನು ಶತ್ರು ನಾಜಿ ಪಡೆಯಿಂದ ರಕ್ಷಿಸುವುದಕ್ಕಾಗಿಯೇ ಸಿದ್ಧಪಡಿಸಿದ ಈ ವಿನ್ಯಾಸವನ್ನು ನಾವಿಕ ಪಡೆಗೆ ನೀಡಿದರೆ ಅವರು ‘‘ಪಿಯಾನೋವೊಂದನ್ನು ಕ್ಷಿಪಣಿಯೊಳಗೆ ಕೂರಿಸಲಾಗುತ್ತದೆಯೇ?’’ ಎಂದು ತಿರಸ್ಕರಿಸುತ್ತಾರೆ.

ಇದಕ್ಕೆ ಮುಖ್ಯಕಾರಣ ಮಿಲಿಟರಿ ಪ್ರಯೋಗಾಲಯಗಳಿಗೆ ಹೊರತಾದ ಆವಿಷ್ಕಾರಗಳನ್ನು ಸುರಕ್ಷತೆಯ ದೃಷ್ಟಿಯಿಂದ ಸ್ವೀಕರಿಸುತ್ತಿರಲಿಲ್ಲ. ಆದರೆ ಎರಡು ದಶಕಗಳ ನಂತರ 1962ರಲ್ಲಿ ಕ್ಯೂಬಾದ ಕ್ಷಿಪಣಿ ಸಮಸ್ಯೆ ಎದುರಾದಾಗ ಹೆಡಿ ಮತ್ತು ಅಂಥೀಲಿಯ ಆವಿಷ್ಕಾರದ ಸುಧಾರಿತ ವಿನ್ಯಾಸದ ಉಪಕರಣಗಳು ಅಮೆರಿಕದ ನಾವಿಕ ಪಡೆಯ ತಂತ್ರಜ್ಞಾನಕ್ಕೆ ಅಳವಡಿಸಲ್ಪಟ್ಟವು. 1997ರಲ್ಲಿ ಇವರ ಈ ಆವಿಷ್ಕಾರಕ್ಕೆ (Electronic Frontier Foundation Pioneer Awarde) ಜೊತೆಗೆ ("Oscars for Inventing'') ಎಂದೇ ಖ್ಯಾತಿ ಪಡೆದ ("The BulbieGnass Spirit of Achievement Bronze Award'')ದೊರೆಯುತ್ತದೆ. ಇವತ್ತಿನ (Wi-Fi, Bluetooth, GSM, GPS, 2G, 3G) ಮುಂತಾದ ನಿಸ್ತಂತು ಸಂವಹನ ತಂತ್ರಜ್ಞಾನಗಳು ಇವರ ಮೂಲ ತಾಂತ್ರಿಕತೆ (FHSS) ನಿಂದಲೇ ಅಭಿವೃದ್ಧಿ ಹೊಂದಿದವು.

1950ರ ದಶಕದಲ್ಲಿ ಹೆಡಿ ಲಾಮಾರ್‌ಳ ಸಿನೆಮಾಯಾನ ಕುಂದುತ್ತದೆ. 1958ರ ("The Female Animal'') ಚಿತ್ರವೇ ಕೊನೆಯ ಸಿನೆಮಾವಾಗುತ್ತದೆ. 1953ರಲ್ಲಿ ಅಮೆರಿಕದ ನಾಗರಿಕತೆಯನ್ನು ಪಡೆಯುವ ಹೆಡಿ1966 ರಲ್ಲಿ ತನ್ನ ಆತ್ಮಕತೆ ("Ecstasy and Me'') ಪ್ರಕಟಿಸುತ್ತಾಳೆ. ಇದು ಅತ್ಯಧಿಕ ಮಾರಾಟವನ್ನು ಕಾಣುತ್ತದೆ. ಸಿನೆಮಾ ಕ್ಷೇತ್ರದಲ್ಲಿ ಮತ್ತೆ ತೊಡಗಿಸಿಕೊಳ್ಳುವ ಹತಾಶೆಯಲ್ಲಿ 1966ರಲ್ಲೊಮ್ಮೆ 1991ರಲ್ಲೊಮ್ಮೆ ಅಂಗಡಿಗಳಲ್ಲಿ ಕಳವಿನ ಆರೋಪ ಹೊತ್ತರೂ ಅಪರಾಧಿಯಾಗಿ ಸಾಬೀತಾಗದೆ ಉಳಿಯುತ್ತಾಳೆ. 1996 ರಲ್ಲಿ ನಡೆದ (Coral Draw cover suite design competition) ನಲ್ಲಿ ಹೆಡಿ ಲಾಮಾರ್ ಮುಖದ (Coral Draw) ಚಿತ್ರವು ಆ ವರ್ಷದ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದು, (Corel Draw) ಕಂಪೆನಿಯು 1997 ರ ತನಕ ತನ್ನ (Corel Draw Suite cover page) ನ ಆಗಿ ಬಳಸಿಕೊಂಡಿತು.

ಹೆಡಿ ಲಾಮಾರ್ ತನ್ನ 85ನೇ ವಯಸ್ಸಿನಲ್ಲಿ 2000 ಇಸವಿಯ ಜನವರಿ 19ರಂದು ಫ್ಲೋರಿಡಾದಲ್ಲಿ ಹೃದ್ರೋಗದಿಂದ ದೈವಾಧೀನಳಾಗುತ್ತಾಳೆ. ಅವಳ ಅಸ್ಥಿಯನ್ನು ಮಗ ವಿಯೆನ್ನಾದ ಕಾಡುಗಳಲ್ಲಿ ಚೆಲ್ಲುತ್ತಾನೆ. ವಿಯೆನ್ನಾದಲ್ಲಿ ಅವಳಿಗೆ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.

ಹೆಡಿ ಲಾಮಾರ್ ನ ಕಲಾಸೇವೆಗೆ ಗೌರವಾರ್ಥವಾಗಿ ಹಾಲಿವುಡ್ ನ (vine street) ಪಕ್ಕದಲ್ಲಿರುವ (Hollywood Walk of Fame) ನಲ್ಲಿ ನಕ್ಷತ್ರವೊಂದನ್ನು ಕೂರಿಸಲಾಗಿದೆ.ಇನ್ನು ವಿಜ್ಞಾನ ತಾಂತ್ರಿಕತೆಯ ಆವಿಷ್ಕಾರದ ಸಾಮಾಜಿಕ ಪರಿಣಾಮಗಳನ್ನು ಗೌರವಿಸಿ 2014ರಲ್ಲಿ ಮರಣೋತ್ತರವಾಗಿ (National Inventors Hall of Fame)ನಲ್ಲಿ ಹೆಡಿ ಲಾಮಾರ್ ಹೆಸರನ್ನು ದಾಖಲಿಸಲಾಗಿದೆ. 2017ರಲ್ಲಿ ಹಾಲಿವುಡ್‌ನ ಖ್ಯಾತ ನಿರ್ದೇಶಕ ಅಲೆಕ್ಸಾಂಡರ್ ಡೀನ್ ಹೆಡಿ ಲಾಮಾರ್ ಕುರಿತ ಸಾಕ್ಷ್ಯಚಿತ್ರ ("Bombshell: The HedyLamarr Story'') ಅನ್ನು ನಿರ್ದೇಶಿಸಿ ನಿರ್ಮಿಸಿದ. ಇದು ಸಹ ಅತ್ಯಧಿಕ ಗಳಿಕೆಯಿಂದ ಯಶಸ್ವಿಯಾಯಿತು.

ಹೀಗೆ ಹೆಡಿ ಲಾಮಾರ್ ಕಲೆಯೊಂದಿಗೆ ಬೆಳೆಯುತ್ತಲೇ ವಿಜ್ಞಾನ ತಂತ್ರಜ್ಞಾನಕ್ಕೆ ತನ್ನ ಕೊಡುಗೆಯನ್ನಿತ್ತು ಕಲೆ, ವಿಜ್ಞಾನಗಳು ಸೀಮಾತೀತವಾಗಿ ಬೆಳೆಯುತ್ತದೆಯೆನ್ನುವ ಸಂದೇಶವನ್ನು ಸಾರಿದ್ದಾಳೆ.

Writer - ರೂಪದರ್ಶಿ ಜಿ. ವೆಂಕಟೇಶ

contributor

Editor - ರೂಪದರ್ಶಿ ಜಿ. ವೆಂಕಟೇಶ

contributor

Similar News