ಎಲ್ಲರೂ ನಮ್ಮವರೇ...

Update: 2018-07-28 18:40 GMT

ಹುಲಿಯು ದೇವರ ವಾಹನ. ಇಲಿಯೂ ದೇವರ ವಾಹನ. ಹೋಗಲಿ ಕಡೆಗೆ ಕಾಗೆಯೂ ದೇವರ ವಾಹನ. ಮೌಲ್ಯ ಆರೋಪಿಸಲು ಆಯ್ಕೆ ನಮ್ಮದು. ನಮ್ಮ ಮೌಲ್ಯದ ಜಗತ್ತಿನಲ್ಲಿ ಹುಲಿ ಶಕ್ತಿಯ ಸಂಕೇತ. ಇದು ಮಾಂಸಾಹಾರಿ ಪ್ರಾಣಿಯಾಗಿದ್ದರೂ ಸಸ್ಯಾಹಾರಿ ಜನರು ಇದನ್ನು ದೇವರಾಗಿ ಪೂಜಿಸುತ್ತಾರೆ. ಗೋವನ್ನು ಮಾತೆಯಾಗಿ ಪೂಜಿಸಿ ಅದನ್ನು ತಿಂದವರನ್ನು ಹಿಂಸಾ ಪ್ರಾಣಿಯಂತೆ ಸಾಯಿಸುತ್ತಾರೆ. ಇವರೇ ಆರೋಪಿಸುವ ಗೋವಿನ ಮೃದುತ್ವ ಅದನ್ನು ಪೂಜಿಸುವ ಜನರಿಗೇ ಇಲ್ಲ.

ಅಗಾಧ ಜ್ಞಾನದ ಭಂಡಾರವಾದ ನಿಸರ್ಗದ ಕ್ರಮದಲ್ಲಿ ನಾವು ಮತ್ತು ಪ್ರಾಣಿಗಳು ಒಂದು ಹಂತದಲ್ಲಿ ಹೊರತಾಗಿಬಿಟ್ಟಿದ್ದೇವೆ. ಪ್ರಾಣಿಗಳು ನಮ್ಮದೇ ಸಂಬಂಧಿಕರು, ದಾಯಾದಿಗಳು. ಅವು ಮತ್ತು ನಾವು ವಿಕಾಸವಾದದ ಟರ್ನಿಂಗ್ ಪಾಯಿಂಟ್‌ಗಳಲ್ಲಿ ಬೇರೆಬೇರೆಯಾಗಿದ್ದೇವೆ ಅಷ್ಟೆ. ಈ ನಿಟ್ಟಿನಲ್ಲಿ ನೋಡುವುದಾದರೆ ಇವರು ನಮ್ಮ ನೆಂಟರು, ರಕ್ತಸಂಬಂಧಿಗಳು ಎಂದು ಪರಿಚಯಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎನಿಸುತ್ತದೆ. ಪ್ರಾಣಿಗಳನ್ನು ಕಡೆಗಣಿಸುವುದು ಎಂದರೆ ನಮ್ಮ ರಕ್ತಸಂಬಂಧಿಕರನ್ನು ಕಡೆಗಣಿಸುವುದು ಎಂದರ್ಥ. ಪ್ರಾಣಿಗಳಲ್ಲಿ ದಯೆಯಿಡಬೇಕೆಂದು ಲೋಕದ ಎಲ್ಲ ಧರ್ಮಗಳೂ ಹೇಳುತ್ತವೆ. ದಯೆ ಇಡಬೇಕು.. ನಿಜ ಅದಕ್ಕಿಂತ, ಅವುಗಳ ಪ್ರಾಕೃತಿಕ ವ್ಯಕ್ತಿತ್ವಕ್ಕೆ ಗೌರವ ನೀಡಬೇಕು. ಇದೇ ಮನುಷ್ಯತ್ವ. ಅಂದರೆ ಮೃಗತ್ವಕ್ಕೆ ಸಲ್ಲತಕ್ಕ ಗೌರವ. ಅದರಲ್ಲಿ ಹುಲಿಗಾದರೂ ಅಷ್ಟೇ ಗೌರವವಿದೆ ಹಾಗೇ ಇಲಿಗೂ ಅಷ್ಟೇ ಗೌರವವಿದೆ. ಈ ಮಾತನ್ನು ವಿಶೇಷವಾಗಿ ಹೇಳುವುದೇಕೆಂದರೆ ಯಾವುದೇ ಆರ್ಗ್ಯಾನಿಕ್ ಅಂದರೆ ಜೀವ ಇರುವ ಜೀವಿಯಾಗಲೀ.. ಚಲಿಸುವ-ಚಲಿಸದಿರುವ ಜೀವಿಯಾಗಲೀ ಅದಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಆದ್ದರಿಂದ ಯಾವುದೂ ಸಹ ಇನ್ನೊಂದರಿಂದ ಹೆಚ್ಚಲ್ಲ. ಮಾನವ ಸಹ ಯಾವುದರಿಂದ ಹೆಚ್ಚಲ್ಲ. ತಾನು ಬೆಳೆಸಿಕೊಂಡ ಪ್ರಜ್ಞೆಯ ಜ್ಞಾನದಿಂದ ಮಾನವ ಸ್ವಲ್ಪ ಹೊರತಾಗಿರಬಹುದು. ಅದು ಪ್ರಕೃತಿ ಆತನಿಗೆ ನೀಡಿದ ಗೌರವ ಎಂದೇ ಭಾವಿಸಿ ಸಕಲ ಪ್ರಾಣಿಗಳಲ್ಲಿ ವಿನೀತನಾಗಿರಬೇಕು. ಮಾನವ ಆಪರೇಷನ್ ಮಾಡಿ ಬಾಲ ಕತ್ತರಿಸಿ ಒಂದು ದೇಹವನ್ನು ತಿದ್ದುಪಡಿ ಮಾಡಬಹುದು, ಆದರೆ ಪ್ರಕೃತಿಯು ಆಪರೇಷನ್ ಇಲ್ಲದೇ ಬಾಲವನ್ನು ಮನುಷ್ಯನಿಂದ ತೆಗೆದುಹಾಕಿದೆ. ಅದೂ ಪ್ರಪಂಚದ ಪ್ರತಿಯೊಬ್ಬ ಮನುಷ್ಯರಿಗೂ ಬಾಲ ಇಲ್ಲದಂತೆ ಆಪರೇಟ್ ಮಾಡಿದೆ. ಇದರಿಂದ ಬರುವ ಭಾವಾರ್ಥವನ್ನು ಫೀಲ್ ಮಾಡುವುದು ನಿಮ್ಮ ಅನುಭಾವಕ್ಕೆ ಬಿಟ್ಟದ್ದು. ನೀವು ನಿಮ್ಮ ಪರಿಸ್ಥಿತಿಯನ್ನು ಎಷ್ಟೇ ತಿದ್ದಲು ಪ್ರಯತ್ನಿಸಿ.. ಅದರೊಂದಿಗೆ ನಿಸರ್ಗದ ಒಂದು ಕೈ ಸದಾ ಸೇರಿರುತ್ತದೆ. ಪ್ರಕೃತಿ ಸಹಜವಾದ ಸ್ವಾರ್ಥವು ಮಾನವನನ್ನು ಪ್ರಜ್ಞಾವಂತನನ್ನಾಗಿ ಮಾಡುವುದರ ಜೊತೆಗೆ ಬಾಳುವುದನ್ನು ಕಲಿಸಿದೆ. ಪ್ರಾಣಿಗಳಿಂದ ನಾವು ಬೇರಲ್ಲ. ನಾವೆಲ್ಲರೂ ರಕ್ತಸಂಬಂಧಿಕರು. ಇದೇ ನಾವು ಪ್ರಕೃತಿಯಿಂದ ತೆಗೆದುಕೊಳ್ಳಬೇಕಾಗಿರುವ ಪಾಠ.

ಯಾವುದೇ ಕ್ಷೇತ್ರದಲ್ಲಿ ಕೆಲವರು ವಿಶಿಷ್ಟ ವ್ಯಕ್ತಿಗಳು ಎಂಥ ಸಮಯದಲ್ಲೂ ಕೆಚ್ಚೆದೆಯಿಂದ ಕಾದಾಡಿ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲೂ ಉಳಿದು ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾರೋ ಅವರಿಗೆ ಹುಲಿಯಂಥ ಮನುಷ್ಯ ಎಂದು ಹೇಳುವುದುಂಟು. ಮೆತ್ತಗಿದ್ದಲ್ಲಿ ಗೋವು ಎಂದು ಹೇಳುವುದುಂಟು.. ಇದೆಲ್ಲ ನಮ್ಮ ಸಮಾಧಾನಗಳಿಗೆ ನಾವು ಮಾಡಿಕೊಂಡಿರುವ ಆರೋಪಗಳು ಅಷ್ಟೆ. ಏಕೆಂದರೆ ಗೋವು ಸಹ ನೈಸರ್ಗಿಕವಾದ ಹಕ್ಕು ಚಲಾವಣೆ ಮಾಡಿ, ಪ್ರಕೃತಿಗೆದುರಾಗಿ ಕಾದಾಡಿ ಉಳಿಯದೇ ಇರುತ್ತಿದ್ದರೆ ಅದರ ರೂಪವೇ ಇರುತ್ತಿರಲಿಲ್ಲ. ಯಾವುದನ್ನು ನೀವು ಮೆತ್ತಗಿನ ವ್ಯಕ್ತಿತ್ವ ಎಂದು ಆರೋಪಿಸುತ್ತಿದ್ದೀರೋ ಅದೂ ಸಹ ಫೈಟ್ ಮಾಡಿಯೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ನಿಸರ್ಗದಲ್ಲಿನ ಪ್ರತಿಯೊಂದೂ ಸಹ ತನ್ನ ಉಳಿವಿಗಾಗಿ ಕಾದಾಡಿಯೇ ತಮ್ಮ ಅಂತಿಮ ಅಸ್ತಿತ್ವ ಉಳಿಸಿಕೊಂಡಿವೆ. ಮತ್ತು ಇದೇ ಸತ್ಯ.

ಈಗಲೂ ಸಂದರ್ಭ ಬಂದಾಗ ಗೋವು ಕಾದಾಟಕ್ಕೆ ಇಳಿಯುತ್ತದೆ. ಇದರಿಂದ ಗೋವಿಗೆ ಆರೋಪಿತವಾಗಿರುವ ಮಾನವ ಮೌಲ್ಯಕ್ಕೆ ಪ್ರಾಕೃತಿಕವಾಗಿ ಬೆಲೆಯಿಲ್ಲ.

ಹುಲಿಯು ದೇವರ ವಾಹನ. ಇಲಿಯೂ ದೇವರ ವಾಹನ. ಹೋಗಲಿ ಕಡೆಗೆ ಕಾಗೆಯೂ ದೇವರ ವಾಹನ. ಮೌಲ್ಯ ಆರೋಪಿಸಲು ಆಯ್ಕೆ ನಮ್ಮದು. ನಮ್ಮ ಮೌಲ್ಯದ ಜಗತ್ತಿನಲ್ಲಿ ಹುಲಿ ಶಕ್ತಿಯ ಸಂಕೇತ. ಇದು ಮಾಂಸಾಹಾರಿ ಪ್ರಾಣಿಯಾಗಿದ್ದರೂ ಸಸ್ಯಾಹಾರಿ ಜನರು ಇದನ್ನು ದೇವರಾಗಿ ಪೂಜಿಸುತ್ತಾರೆ. ಗೋವನ್ನು ಮಾತೆಯಾಗಿ ಪೂಜಿಸಿ ಅದನ್ನು ತಿಂದವರನ್ನು ಹಿಂಸಾ ಪ್ರಾಣಿಯಂತೆ ಸಾಯಿಸುತ್ತಾರೆ. ಇವರೇ ಆರೋಪಿಸುವ ಗೋವಿನ ಮೃದುತ್ವ ಅದನ್ನು ಪೂಜಿಸುವ ಜನರಿಗೇ ಇಲ್ಲ. ನಾನು ದರ್ಬಾರು ಮಾಡಬೇಕು ಎಂದರೆ ನನಗೆ ಬೇಕಾಗಿರುವ ಮೌಲ್ಯ ಆರೋಪಿಸಲಿಕ್ಕೆ ಗೋವೇ ಆಗಬೇಕಿಲ್ಲ. ಅದು ಇಲಿಯೂ ಆಗಬಹುದು, ಕಾಗೆಯೂ ಆಗಬಹುದು. ಸದ್ಯಕ್ಕದು ಗೋವಿಗೆ ಆರೋಪಿತವಾಗಿ, ಗೋಹತ್ಯೆಗಾಗಿ ಮಾನವಹತ್ಯೆ ಬೀದಿಗಳಲ್ಲೆ ಓಪನ್ ಆಗಿ ನಡೆಯುತ್ತಿದೆ. ನಾವೇ ನಮ್ಮವರನ್ನು ಕೊಲ್ಲುತ್ತಿದ್ದೇವೆ.

ಸಂತಾನ ಹೊಟ್ಟೆಯಿಂದ ಹುಟ್ಟಿದಾಗ ಸಂಭ್ರಮಿಸುವ ನಾವು, ಅದೇ ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ಅವುಗಳ ಸಂತಾನಗಳ ಸಮೇತ ಸಾಯಿಸುತ್ತೇವೆ, ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ. ನಮಗೆ ಅದರಿಂದ ತೊಂದರೆಯಾಗುವ ಕಾರಣದಿಂದ ನಾವು ಅವುಗಳನ್ನು ಸಾಯಿಸುತ್ತೇವೆ ಅಲ್ಲವೇ. ಆದರೆ ಪ್ರಕೃತಿಯ ಲೆಕ್ಕದಲ್ಲಿ ಅದು ಜೀವನಕ್ರಮ. ಒಂದು ಜೀವ ಹೇಗೆ ಬದುಕನ್ನು ಕಂಡುಕೊಳ್ಳುತ್ತದೋ ಅದೇ ಅದರ ಜೀವನವಾಗಿರುತ್ತದೆ ಬದುಕಾಗಿರುತ್ತದೆ. ಮತ್ತದನ್ನು ನಾವು ನಮಗೆ ಬೇಕಾದ ಹಾಗೆ ಕ್ರಮ ಮಾಡಿಕೊಳ್ಳುತ್ತೇವೆ. ಇಂತಹ ಕ್ರಮಗಳಿಂದಲೇ ತತ್ವ, ಸಿದ್ಧಾಂತ, ಅನುಭಾವಗಳು ಹುಟ್ಟುವುದು. ಇದೇ ನಮ್ಮನ್ನು ಪ್ರಾಣಿಗಳಿಂದ ಹೊರತಾಗಿ ಮಾಡಿರುವುದು. ಈ ಕಾರಣಕ್ಕಾಗಿ ಪ್ರಾಣಿಗಳನ್ನು ಗೌರವಿಸುವುದು ಮಾನವನ ಕರ್ತವ್ಯವಾಗಿದೆ.

ನಮಗೆ ಬರವಣಿಗೆ ಬರುತ್ತದೆ ಮತ್ತು ಅದನ್ನು ಓದುವವರೂ ನಾವೇ ಆಗಿದ್ದೇವೆ. ಪ್ರಾಣಿಗಳಂತೂ ಓದುವುದಿಲ್ಲ. ಹಾಗಾಗಿ ನಮಗನಿಸಿದ ಎಲ್ಲವನ್ನು ಬರೆದು ಆರೋಪಿಸುತ್ತಾ ವಿಶ್ಲೇಷಿಸುತ್ತಾ ಒಂದು ರೀತಿಯಲ್ಲಿ ಪ್ರಕೃತಿಯನ್ನು ಕಡೆಗಣಿಸಿಬಿಟ್ಟಿದ್ದೇವೆ. ಗೋವಿನಲ್ಲಿ ನೋಡುತ್ತಿರುವ ಮೌಲ್ಯವು ಹಂದಿಯಲ್ಲಿ ಆರೋಪಿತವಾಗಿರು ತ್ತಿದ್ದರೆ ಇಂದು ಹಂದಿಹತ್ಯೆಗಾಗಿ ನಿಮ್ಮನ್ನು ಸಾಯಿಸಲಾ ಗುತ್ತಿತ್ತು. ಗೋಹತ್ಯೆ ಕಾರಣಕ್ಕಾಗಿ ಮಾನವಹತ್ಯೆ ನಡೆಯುತ್ತಿ ರುವುದು, ಸಕಲವೂ ತನ್ನ ಅಂಕೆಯಲ್ಲಿರ ಬೇಕು ಎಂಬ ಧಾರ್ಷ್ಟದಿಂದ. ಮಾನವ ಈ ರೀತಿಯಲ್ಲಿ ಪ್ರಕೃತಿಯೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾನೆ. ಪ್ರಕೃತಿಗೆ ಗೋವೂ ಒಂದೇ ಇಲಿಯೂ ಒಂದೇ. ಹಂದಿ, ಸೊಳ್ಳೆಯೂ ಒಂದೇ. ಇದೇ ಪ್ರಕೃತಿಧರ್ಮ. ಇದನ್ನು ಬಿಟ್ಟು ನೀವು ಒಂದು ವರ್ಗಕ್ಕೆ ಸೇರಿದ ಪ್ರಾಣಿಯನ್ನು ಕೊಂದು ತಿನ್ನುತ್ತೀರೆಂದ ಮಾತ್ರಕ್ಕೆ ನಿಮ್ಮನ್ನು ಸಾಯಿಸುವ ನಿರ್ಧಾರಕ್ಕೆ ಬರುವುದು ಪ್ರಕೃತಿ ವಿರೋಧಿಯಾಗಿದೆ. ನಾವೇ ನಮ್ಮವರನ್ನು ಕೊಲ್ಲುವುದಾಗಿದೆ. ಅಂತಿಮವಾಗಿ ಇದು ಹೀನ.

ಸೊಪ್ಪು ಸಾರು, ಕೋಳಿ ಸಾರು ಒಂದೇ. ಏಕೆಂದರೆ, ಜೀವವಿರುವುದು ತಾನೇ ಬೆಳೆಯಲು ಸಾಧ್ಯ. ಸೊಪ್ಪು ಬೀಜದ ರೂಪದಲ್ಲಿದ್ದದ್ದು ಬೆಳೆದು ಗಿಡವಾಗುತ್ತದೆ ಎಂದ ಮೇಲೆ ಅದಕ್ಕೆ ಜೀವ ಇರುವುದರಿಂದ ಮಾತ್ರ ಅದು ಬೆಳೆಯಿತು ಎಂದರ್ಥ ತಾನೇ.. ಅಂದರೆ ಸೊಪ್ಪು ಸಾರು ಕೂಡ ನಾನ್‌ವೆಜ್ಜೇ ಆಗಿದೆ. ಗಿಡಗಳು ಸಸಿಗಳು ನಮ್ಮೆದುರು ಪ್ರಾಣಿಗಳಂತೆ ಚೆಲ್ಲಾಟವಾಡಿಕೊಂಡಿ ರುವುದನ್ನು ನಾವು ಕಾಣುವುದಿಲ್ಲ. ಹಾಗಾಗಿ ಅವುಗಳಿಗೆ ಜೀವವಿದೆಯೋ ಇಲ್ಲವೋ ನಮ್ಮ ತರ್ಕಕ್ಕದು ಬೇಕಿಲ್ಲ. ಹೆಮ್ಮರವೊಂದರ ಕಾಂಡದಲ್ಲಿ ಸುತ್ತಲೂ ತೊಗಟೆಯನ್ನು ಒಂದು ಸುತ್ತು ಪೂರ್ತಿಯಾಗಿ ಕೆತ್ತುಬಿಡಿ.. ಆ ಹಿರಿದಾದ ಮರ ಸಾಯದಿದ್ದರೆ ಕೇಳಿ. ಒಂದು ಸುತ್ತು ಕಾಂಡ ಕೆತ್ತುವುದೂ ಒಂದೇ ಕುತ್ತಿಗೆ ಕೊಯ್ಯುವುದೂ ಒಂದೇ.

ವಿಕಾಸವಾದದ ಪ್ರಕಾರವೇ ಹೇಳುವುದಾದರೆ, ಶಕ್ತಿಯಿದ್ದವರೇ ಅಭಿವೃದ್ಧಿಯಾಗುವುದು. ಅದರಂತೆ ಹುಲಿಗೆ ಬಲವನ್ನು ಗೋವಿಗೆ ಮೃದುತ್ವವನ್ನು ಆರೋಪಿಸಿ ಶಕ್ತಿ ಮೆರೆಯಲು ಅದನ್ನೊಂದು ಮೌಲ್ಯವಾಗಿ ಬಳಸಿಕೊಳ್ಳಲಾಗುತ್ತಿದೆ. ಬಲವು ಪ್ರಜ್ಞಾವಂತ ವಲಯದೊಳಗೆ ಗೆಲ್ಲುತ್ತದೋ ಇಲ್ಲವೋ ಬಲಪ್ರಯೋಗವಂತೂ ಇದ್ದೇ ಇರುತ್ತದೆ. ಶಕ್ತಿ ಇರುವವರೆಲ್ಲರೂ ಅಳಿಯಲಾರರು ಎಂಬ ತತ್ವವನ್ನು ಹೇಳಿದರೆ ಬಲಿಷ್ಠ ಡೈನೋಸಾರ್‌ಗಳು ಯಾಕೆ ಅಳಿದವು ಎಂಬ ಪ್ರಶ್ನೆ ನಿಲ್ಲುತ್ತದೆ. ಶಕ್ತಿಯ ಜೊತೆಗೆ ಸಂದರ್ಭವೂ ಸಹ ಅಷ್ಟೇ ಪಾತ್ರ ನಿರ್ವಹಿಸುತ್ತದೆ. ನಿಸರ್ಗದ ಈ ಸಾಂದರ್ಭಿಕ ನಡೆಯು ಇತಿಹಾಸದ ತಾಯಿಯಾಗಿದೆ. ವಿಕಾಸವಾದಕ್ಕೆ ಪ್ರೇರಣೆಯಾಗಿದೆ.

ವಿಕಾಸವಾದದ ಪ್ರಕಾರ ಅಂತಿಮವಾಗಿ ನಾವೆಲ್ಲ ರಕ್ತಸಂಬಂಧಿಗಳು. ಗೋವನ್ನು ತಿನ್ನುವವರೂ ನಮ್ಮ ಸಂಬಂಧಿಕರೇ. ಗೋಸೇವನೆ ಮಾಡುವ ಕಾರಣಕ್ಕೆ ಕೊಲೆ ಮಾಡುವ ಹುಂಬ ಮಾನವರೂ ನಮ್ಮ ಸಂಬಂಧಿಕರೇ.

Writer - ಆಶಾ ಸಿಂಗ್ ಶಿವಮೊಗ್ಗ

contributor

Editor - ಆಶಾ ಸಿಂಗ್ ಶಿವಮೊಗ್ಗ

contributor

Similar News