ನ.23-24ಕ್ಕೆ 'ವಿಶ್ವ ತುಳು ಸಮ್ಮೇಳನ-ದುಬಾಯಿ-2018': ಲಾಂಛನ ಅನಾವರಣ

Update: 2018-07-29 05:05 GMT

ದುಬೈ, ಜು.29: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ‘ವಿಶ್ವ ತುಳು ಸಮ್ಮೇಳನ ದುಬಾಯಿ- 2018’ ನವೆಂಬರ್ 23 ಮತ್ತು 24ರಂದು ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ದುಬೈಯ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಮಾತನಾಡಿ, ಸಮ್ಮೇಳನದ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಸಮ್ಮೇಳನದ ಪೂರ್ವತಯಾರಿಗೆ ಸೂಕ್ತ ಮಾರ್ಗದರ್ಶ ನೀಡಿದರು.

ಯು.ಎ.ಇ ಎಕ್ಸೇಂಜ್ ಗ್ಲೋಬಲ್ ಅಪರೇಶನ್ಸ್ ಅಧ್ಯಕ್ಷ ಸುಧೀರ್‌ಕುಮಾರ ಶೆಟ್ಟಿ ‘ವಿಶ್ವ ತುಳು ಸಮ್ಮೇಳನ- ದುಬಾಯಿ 2018’ರ ಅಧಿಕೃತ ಲಾಂಛನವನ್ನು ಅನಾವರಣಗೊಳಿಸಿದರು.

ಈ ಲಾಂಛನವನ್ನು ತುಳುನಾಡಿನ ಮತ್ತು ಗಲ್ಫ್ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಯೋಜಿಸಿ ವಿನ್ಯಾಸಗೊಳಿಸಿರುವುದಾಗಿ ಲಾಂಭನ ವಿನ್ಯಾಸಕಾರ ಕಲಾ ನಿರ್ದೇಶಕ ಬಿ. ಕೆ ಗಣೇಶ್ ರೈ ವಿವರಿಸಿದರು.

* ಸಮ್ಮೇಳನದ ಸ್ಮರಣ ಸಂಚಿಕೆಯ ಹೆಸರು ಅನಾವರಣ

ಸಮ್ಮೇಳನದ ಸವಿ ನೆನಪಿಗಾಗಿ ಹೊರತರಲಾಗುವ ಸ್ಮರಣ ಸಂಚಿಕೆಗೆ ಸೂಕ್ತ ಹೆಸರು ಸೂಚಿಸಲು ಆಹ್ವಾನಿಸಲಾಗಿತ್ತು. 22 ಮಂದಿ ಕಳುಹಿಸಿದ್ದ 166 ಹೆಸರುಗಳ ಪೈಕಿ ಬಿ.ಕೆ.ಗಣೇಶ್ ರೈ ಸೂಚಿಸಿದ್ದ ‘ವಿಶ್ವ ತುಳು ಐಸಿರಿ’ ಹೆಸರು ಅಂತಿಮವಾಗಿ ಆಯ್ಕೆಯಾಯಿತು. ಹೆಸರು ಅಂತಿಮಗೊಳಿಸಲು ಹಿರಿಯ ಸಾಹಿತಿ, ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮತ್ತು ಮುಂಬೈಯಲ್ಲಿ ನೆಲೆಸಿರುವ ಡಾ. ಸುನೀತಾ ಶೆಟ್ಟಿ ಸಹಕರಿಸಿದರು.

ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಹಂತದ ಕಾರ್ಯಯೋಜನೆಯನ್ನು ಡಿಜಿಟಲ್ ಡಿಸ್ ಪ್ಲೇಯೊಂದಿಗೆ ಶೋಧನ್ ಪ್ರಸಾದ್ ವಿವರಿಸಿದರು.

ಸಭೆಯಲ್ಲಿ ಸಲಹ ಸಮಿತಿಯ ಸದ್ಯರಾದ ಬಿ.ಕೆ ಗಣೇಶ್ ರೈ, ದೇವ್‌ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿ ಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಲಹಾ ಸಮಿತಿಯ ಸದಸ್ಯ ಶೋಧನ್ ಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News