ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ಆರೋಪಿಯ ಬಂಧನ
ಬೆಂಗಳೂರು, ಜು.29: ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾದ ಆರೋಪಿ ಕಿರಣ ಎಂಬಾತನನ್ನು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಎಸ್.ಮಂಜು ನೇತೃತ್ವದ ತಂಡ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಕಿರಣ ಅಲಿಯಾಸ್ ಶಶಿಕಿರಣ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ 9 ಪ್ರಕರಣಗಳಲ್ಲಿ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಜು.25 ರಂದು ರಾತ್ರಿ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೋಳರಪಾಳ್ಯದ 2ನೆ ಕ್ರಾಸ್ ಮತ್ತು ಭುವನೇಶ್ವರಿ ನಗರದ 26ನೇ ಕ್ರಾಸ್‌ನಲ್ಲಿ ಐದು ಜನರ ತಂಡ, ಮಚ್ಚು, ಲಾಂಗ್‌ಗಳಿಂದ ಐದು ವಾಹನಗಳ ಗಾಜುಗಳನ್ನು ಹೊಡೆದು ದಾಂಧಲೆ ಮಾಡಿತ್ತು. ಈ ಮೂಲಕ ಭಯದ ವಾತಾವರಣ ನಿರ್ಮಿಸಿದ್ದರು. ಮಾತ್ರವಲ್ಲ ಇಲ್ಲಿನ ಕಾಂಗ್ರೆಸ್ ಕಚೇರಿಯ ಎದುರು ನಡೆದ ಪ್ರತಿಭಟನೆಯ ವೇಳೆ ಕಚೇರಿಗೆ ನುಗ್ಗಿದ್ದ ಆರೋಪಿ ಕಿರಣ ಅಲ್ಲಿಯೂ ದಾಂಧಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಅಗ್ರಹಾರ ಮತ್ತು ಬಸವೇಶ್ವರ ನಗರ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.
ತಂಡಗಳು ಕಾರ್ಯಾಚರಣೆ ಸಂದರ್ಭದಲ್ಲಿ ಕಳೆದ ರಾತ್ರಿ ಆರೋಪಿ ಕಿರಣ ಇಲ್ಲಿನ ಕೆ.ಪಿ.ಅಗ್ರಹಾರದ ರೈಲ್ವೆ ಸೇತುವೆ ಬಳಿಯ ಬಿನ್ನಿ ಕ್ಯಾಂಟೀನ್ ಹತ್ತಿರ ಇರುವ ಖಚಿತ ಮಾಹಿತಿ ಆಧರಿಸಿ ಇನ್ಸ್ಪೆಕ್ಟರ್ ಎಸ್.ಎಸ್.ಮಂಜು ಮತ್ತು ತಂಡದವರು ಮಧ್ಯರಾತ್ರಿ 12.45 ಸುಮಾರಿಗೆ ಸ್ಥಳಕ್ಕೆ ದಾವಿಸಿದ್ದರು. ಪೊಲೀಸರು ಬಂದ ವಿಷಯ ತಿಳಿದ ತಕ್ಷಣ ಕಿರಣ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ. ಈ ವೇಳೆ ಇನ್ಸ್ಪೆಕ್ಟರ್ ಮಂಜು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ತಾಕೀತು ಮಾಡಿದ್ದರು.
ಆದರೆ, ಆರೋಪಿ ಇದನ್ನು ಲೆಕ್ಕಿಸದ ಆರೋಪಿ ತನ್ನನ್ನು ಹಿಡಿಯಲು ಬಂದ ಮುಖ್ಯ ಪೇದೆ ನಾಗರಾಜಪ್ಪಗೆ ತನ್ನ ಬಳಿ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಇನ್ಸ್ಪೆಕ್ಟರ್ ಮಂಜು ಪ್ರಾಣ ರಕ್ಷಣೆಗಾಗಿ ಸರ್ವೀಸ್ ಪಿಸ್ತೂಲಿನಿಂದ ಆರೋಪಿಯ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ. ಕುಸಿದು ಬಿದ್ದ ಆರೋಪಿಯನ್ನು ಇತರ ಸಿಬ್ಬಂದಿ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿರಣ ಬೀಸಿದ ಮಚ್ಚಿನಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ವಿಜಯನಗರ ಉಪ ವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.