ಕುಮಾರಸ್ವಾಮಿ ಮಾತಿಗೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ: ನಂಜಾವಧೂತ ಸ್ವಾಮೀಜಿ

Update: 2018-07-29 13:26 GMT

ಬೆಂಗಳೂರು, ಜು.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕ ವ್ಯಕ್ತಿಯಾಗಿದ್ದು, ಅವರಾಡುವ ಪ್ರತಿ ಪದಕ್ಕೂ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ರವಿವಾರ ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ ಮತ್ತು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ತರ ಕರ್ನಾಟಕ ಭಾಗಕ್ಕೆ ನೀರವಾರಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಆ ಭಾಗದ ಜನತೆ ಇಂದಿಗೂ ನೆನೆಯುತ್ತಾರೆ. ಆದರೆ, ರಾಜಕೀಯ ದುರುದ್ದೇಶದಿಂದಾಗಿ ಕೆಲವರು ದೇವೇಗೌಡ ಕುಟುಂಬದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮಾಡಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಹಾಗೂ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಿದ್ದಾರೆ. ಆದರೂ ಅವರಾಡುವ ಮಾತುಗಳನ್ನೆ ಮುಂದಿಟ್ಟುಕೊಂಡು ತೇಜೋವಧೆ ಮಾಡುವುದು ಸರಿಯಲ್ಲವೆಂದು ಅವರು ಹೇಳಿದರು.

ಕೆಂಪೇಗೌಡ ಜಾತಿ ಮೀರಿದವರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ತಮ್ಮನ್ನು ಒಂದು ಜಾತಿಗೆ ಸೀಮಿತಗೊಳಿಸಿಕೊಂಡವರಲ್ಲ. ಶ್ರಮಿಕ ವರ್ಗದರಿಗೆ ಒಂದೊಂದು ಪೇಟೆಯನ್ನು ನಿರ್ಮಿಸಿಕೊಟ್ಟು, ಅವರ ಕಸುಬಿಗೆ ಮಾರುಕಟ್ಟೆಗೆ ಸೃಷ್ಟಿಸಿದವರು. ಹೀಗಾಗಿ ಅವರ ಹೆಸರಿನಲ್ಲಿ ಸ್ಥಾಪಿತಗೊಂಡಿರುವ ಸಂಘ, ಸಂಸ್ಥೆಗಳು ಜಾತ್ಯತೀತ ಚಿಂತನೆಗಳಡಿ ಮುನ್ನಡೆಯಬೇಕೆಂದು ಅವರು ಆಶಿಸಿದರು.

ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯ: ಇಂದಿನ ವಿದ್ಯಾರ್ಥಿಗಳು ಪ್ರತಿಷ್ಟಿತ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ನೌಕರಿಯನ್ನು ಪಡೆಯುತ್ತಾರೆ. ಆದರೆ, ಅವರಿಗೆ ಭಾವನೆಗಳೆ ಇರುವುದಿಲ್ಲ. ಪ್ರತಿಯೊಂದನ್ನು ಹಣದಿಂದ ಕೊಂಡುಕೊಳ್ಳುವುದಕ್ಕೆ ತವಕಿಸುತ್ತಿರುತ್ತಾರೆ. ಇಂತಹ ಯುವಕರಿಂದ ಕುಟುಂಬಕ್ಕಾಗಲಿ, ದೇಶಕ್ಕಾಗಲಿ ಯಾವುದೆ ಪ್ರಯೋಜವಿಲ್ಲವೆಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ವಿದ್ಯೆ ಜತೆಗೆ ಸಂಸ್ಕಾರ, ಸಂಸ್ಕೃತಿ ಬಹಳ ಮುಖ್ಯವಾಗಿ ಕಲಿಸಬೇಕು. ಸಂಸ್ಕಾರವೊಂದಿದ್ದರೆ, ತನ್ನ ಇಡೀ ಪರಿಸರ, ಸಮಾಜವನ್ನು ಉತ್ತುಂಗಕ್ಕೆ ಕೊಂಡೊಯ್ಯಬಲ್ಲ. ಹೀಗಾಗಿ ಪೋಷಕರು ಹಾಗೂ ಶಾಲೆ-ಕಾಲೇಜುಗಳು ತಮ್ಮ ವಿದ್ಯಾರ್ಥಿಗಳನ್ನು ಸಂಸ್ಕಾರವಂತರಾಗಿ ರೂಪಿಸಬೇಕೆಂದು ಅವರು ಆಶಿಸಿದರು.

ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ನಾನು ಬಾಲ್ಯದಿಂದಲೂ ಪರಿಸರದ ಒಡನಾಡಿಯಾಗಿ ಬೆಳೆದಿದ್ದೇನೆ. ಮರ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ, ಪೋಷಣೆಗೆ ವಿಶೇಷ ಆಸಕ್ತಿ ವಹಿಸಿದ್ದೆ. ತದನಂತರ ಬಡವರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡೆ ಎಂದು ತಮ್ಮ ಬಾಲ್ಯವನ್ನು ನೆನೆದರು.

ಕೇವಲ ಹೋರಾಟಗಳಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲವೆಂದು ಬಹುಬೇಗನೆ ಅರ್ಥ ಮಾಡಿಕೊಂಡೆ. ಹೀಗಾಗಿ ರಾಜಕೀಯ ಕ್ಷೇತ್ರಕ್ಕೆ ಬಂದೆ. ನನ್ನ ಕ್ಷೇತ್ರದ ಜನತೆ ಮೊದಲ ಅವಧಿಯಲ್ಲಿಯೆ ಗೆಲ್ಲಿಸಿ, ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ಈಗ ಅವರಿಗಾಗಿ ಶ್ರಮಿಸುವುದು ನನ್ನ ಆದ್ಯತೆಯೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಈ ವೇಳೆ ಶಾಸಕ ಎಚ್.ವಿಶ್ವನಾಥ್, ನಾರಾಯಣ ಗೌಡ, ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್, ಗೌರವಾಧ್ಯಕ್ಷ ಮಾಯಣ್ಣ, ಉದ್ಯಮಿ ವಿಶ್ವನಾಥ್, ಬಿಬಿಎಂಪಿ ಸದಸ್ಯೆ ಮೋಹನ್‌ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News