ಸಂಪುಟ ವಿಸ್ತರಣೆ, ಕೆಪಿಸಿಸಿ ಪುನಾರಚನೆ ವಿಳಂಬ ಸಾಧ್ಯತೆ

Update: 2018-07-29 14:39 GMT

ಬೆಂಗಳೂರು, ಜು. 29: ಸಚಿವ ಸಂಪುಟ ವಿಸ್ತರಣೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪುನಾರಚನೆಗೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಿನ್ನಮತದ ಬೇಗುದಿಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಚಿಂತನೆ ನಡೆಸಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಜೇನುಗೂಡಿಗೆ ಕೈಹಾಕುವುದು ಬೇಡ. ಇದರಂದ ಅಪಾಯಕ್ಕೆ ಆಹ್ವಾನ ನೀಡದಂತೆ ಆಗುತ್ತಿದೆ. ಅಲ್ಲದೆ, ಚುನಾವಣಾ ಹೊಸ್ತಿಲಿನಲ್ಲಿ ಬಂಡಾಯ ಸೃಷ್ಟಿಸುವುದು ಬೇಡ ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಸಚಿವ ಸ್ಥಾನ ವಂಚಿತರ ಬೇಗುದಿ ಹಿನ್ನೆಲೆಯಲ್ಲಿ ಅತೃಪ್ತಿ, ಅಸಮಾಧಾನವಿದೆ. ಈ ವೇಳೆ ಕೆಪಿಸಿಸಿ ಪುನಾರಚನೆ, ಸಂಪುಟ ವಿಸ್ತರಣೆಯಂತಹ ಕೆಲಸಕ್ಕೆ ಕೈಹಾಕಿದರೆ ಮತ್ತಷ್ಟು ಗೊಂದಲ ಸೃಷ್ಟಿಸಿದಂತೆ ಆಗುತ್ತದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪುನಾರಚನೆ ಸರಿಯಲ್ಲ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.

ಆಷಾಢದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವುದು ಎಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ನಾಲ್ವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿ, ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಇನ್ನು ಆರೇಳು ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದ್ದು, ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಎದುರಾಗಲಿರುವ ಸಂಭಾವ್ಯ ಭಿನ್ನಮತ, ಅತೃಪ್ತಿ, ಅಸಮಾಧಾನದ ಹೊಡೆತ ತಪ್ಪಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ. ಇದರಿಂದ ಮೈತ್ರಿ ಸರಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದು ಸೂಕ್ತ. ಅಲ್ಲದೆ, ಆ ಸಂದರ್ಭದಲ್ಲೆ ಕೆಪಿಸಿಸಿ ಪುನಾರಚನೆಯನ್ನು ಮಾಡಲಾಗುವುದು ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಈ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷ ಪುನಾರಚಿಸಲು ಮುಂದಾಗಿದ್ದು, ಎಲ್ಲ ಕಾರ್ಯದರ್ಶಿಗಳು ಸೇರಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳ ಬದಲಾವಣೆಗೆ ಸಿದ್ಧತೆ ನಡೆಸಿರುವುದು ಕೈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಏಕಾಏಕಿ ಕೆಪಿಸಿಸಿ ಪುನಾರಚನೆಗೆ ಮುಂದಾಗಿರುವ ಕ್ರಮದಿಂದ ಪಕ್ಷಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣಾ ವೇಳೆ ಉಸ್ತುವಾರಿ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡುವುದು ಕ್ರಮ ಸರಿಯಲ್ಲ. ಅವರಿಗೆ ಆ ಜಿಲ್ಲೆಯ ಒಳ ರಾಜಕಾರಣ ಗೊತ್ತಿರುತ್ತದೆ. ಬದಲಾವಣೆ ಮಾಡಿ ಹೊಸಬರನ್ನು ನೇಮಕ ಮಾಡಿದರೆ ನಾಲ್ಕೈದು ತಿಂಗಳಲ್ಲಿ ಅವರು ಜಿಲ್ಲೆಯ ಒಳ ರಾಜಕೀಯವನ್ನು ಅರಿತು ಚುನಾವಣೆಗೆ ಸಜ್ಜಾಗುವುದು ಕಷ್ಟಸಾಧ್ಯ. ಹೀಗಾಗಿ ಸಂಪುಟ ವಿಸ್ತರಣೆ, ಕೆಪಿಸಿಸಿ ಪುನಾರಚನೆಗೆ ತೀರ್ಮಾನದಿಂದ ಕಾಂಗ್ರೆಸ್ ಸದ್ಯಕ್ಕೆ ಹಿಂದೆ ಸರಿಯುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News