ಪೋಸ್ಕೋ ಪ್ರಕರಣದ ವಿಚಾರಣೆಯಲ್ಲಿ ವಿಳಂಬ: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು, ಜು.27: ಪೊಸ್ಕೋ ಪ್ರಕರಣವೊಂದರ ವಿಚಾರಣೆ ಶೀಘ್ರ ಪೂರ್ಣಗೊಳಿಸುವಂತೆ 4 ಬಾರಿ ನಿರ್ದೇಶನ ನೀಡಿದ್ದರೂ ಪಾಲಿಸದ ಅಧೀನ ನ್ಯಾಯಾಲಯದ ಕ್ರಮಕ್ಕೆ ತಿವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, 4 ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 'ಒಂದು ತಿಂಗಳೊಳಗೆ ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಿಕೊಂಡು ತಕ್ಷಣವೇ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಒಂದೊಮ್ಮೆ ಬಾಲಕಿಯ ಹೇಳಿಕೆ ಪಡೆಯದಿದ್ದರೂ 30 ದಿನಗಳ ಒಳಗೆ ಆರೋಪಿಗೆ ಜಾಮಿನು ನೀಡಬೇಕು' ಎಂದು ಸೂಚಿಸಿದೆ.
ಪ್ರಕರಣವೇನು: ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿದ್ದ ಆರೋಪಿ ತಮ್ಮ 3 ವರ್ಷದ ಮಗಳ ಮೆಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿ ಬಾಲಕಿಯ ತಾಯಿ 2014ರ ಜ.9ರಂದು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಮರುದಿನ ಪೊಸ್ಕೊ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ಪ್ರಕರಣದ ವಿಚಾರಣೆಯನ್ನು ಅಧೀನ ನ್ಯಾಯಾಲಯ ಪೂರ್ಣಗೊಳಿಸಿಲ್ಲ. ತಾನು ನಿರಪರಾಧಿಯಾಗಿದ್ದು, ಜಾಮಿನು ನೀಡಬೇಕೆಂದು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಪೊಸ್ಕೊ ಕಾಯ್ದೆ 2012ರ ಸೆಕ್ಷನ್ 35(1) ಪ್ರಕಾರ ಘಟನೆ ನಡೆದ 30 ದಿನದೊಳಗೆ ಸಂತ್ರಸ್ತ ಬಾಲಕಿಯ ಹೇಳಿಕೆ ಪಡೆಯಬೇಕು. ಆದರೆ, ನಾಲ್ಕುವರೆ ವರ್ಷ ಕಳೆದರೂ ಹೇಳಿಕೆ ಪಡೆದಿಲ್ಲ. ಅಲ್ಲದೆ, ಕಾಯ್ದೆಯ ಸೆಕ್ಷನ್ 35(2)ರ ಪ್ರಕಾರ ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಬೇಕು. ಹೀಗಿದ್ದರೂ ವಿಳಂಬ ಮಾಡುತ್ತಿರುವ ಅಧಿನ ನ್ಯಾಯಾಲಯ ಮೆಲಿಂದ ಮೇಲೆ ಅವಧಿ ವಿಸ್ತರಣೆ ಮಾಡಿಕೊಳ್ಳುತ್ತಿದೆ. ಇದರಿಂದ ಆರೋಪಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರ ಪರ ವಕೀಲ ಡಿ. ಮೊಹನ್ ಕುಮಾರ್ ವಾದ ಮಂಡಿಸಿದ್ದರು.
ರಾಜ್ಯ ಹೈಕೋರ್ಟ್ ತೀರ್ಪು: ಜಾಮಿನು ಕೋರಿ 4ನೆ ಬಾರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠದಲ್ಲಿ ನಡೆಯಿತು. ಪ್ರಕರಣದ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ನಾಲ್ಕು ಬಾರಿ ನಿರ್ದೇಶನ ನೀಡಲಾಗಿದ್ದರೂ ಅಧೀನ ನ್ಯಾಯಾಲಯ ಪಾಲಿಸದಿರುವುದು ದುರದೃಷ್ಟಕರ ಸಂಗತಿ ಎಂದು ಪೀಠ ಅಭಿಪ್ರಾಯಪಟ್ಟಿತು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ನೀಡಿದ್ದ ಕಾಲಾವಕಾಶ 2018ರ ಜ.9ರಂದೇ ಮುಕ್ತಾಯವಾಗಿದೆ. ಹೀಗಿದ್ದರೂ ಅಧೀನ ನ್ಯಾಯಾಲಯ ವಿಚಾರಣೆಯನ್ನೂ ಪೂರ್ಣಗೊಳಿಸದೆ, ಇತ್ತ ಅವಧಿ ವಿಸ್ತರಣೆಗೂ ಮನವಿ ಮಾಡಿಲ್ಲ. ಹೈಕೋರ್ಟ್ ಆದೇಶ ಪಾಲಿಸಲು ವಿಫಲವಾಗಿರುವ ಬಗ್ಗೆ ಅಧೀನ ನ್ಯಾಯಾಲಯದಿಂದ ವಿವರಣೆ ಕೇಳುವುದು ಅನಿವಾರ್ಯವಾಗಿದೆ ಎಂದು ಜು.3ರಂದು ನಡೆದ ವಿಚಾರಣೆಯಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಕರಣದ ವಿಚಾರಣೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುವಂತೆ 2016ರ ಜೂ.15ರಂದು ಅಧಿನ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಈ ಮಧ್ಯೆ ವಿಚಾರಣೆ ಪೂರ್ಣಗೊಳಿಸಲು ಮತ್ತೆ 6 ತಿಂಗಳು ಕಾಲಾವಕಾಶ ನೀಡುವಂತೆ ಅಧೀನ ನ್ಯಾಯಾಲಯ 2017ರ ಜ. 9ರಂದು ಹೈಕೋರ್ಟ್‌ಗೆ ಮನವಿ ಮಾಡಿತ್ತು. 6 ತಿಂಗಳು ಕಾಲಾವಕಾಶ ನೀಡಲು ಒಪ್ಪದ ಹೈಕೋರ್ಟ್ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಿತ್ತು. ಇದಾದ ನಂತರ ಮತ್ತೆ 6 ತಿಂಗಳ ಕಾಲಾವಕಾಶ ನೀಡಿತ್ತು. 2018ರ ಮಾ.14ರಂದು ಅಧಿನ ನ್ಯಾಯಾಲಯಕ್ಕೆ 4ನೆ ಬಾರಿ ನಿರ್ದೇಶನ ನೀಡಿತ್ತು.
ಡಿ.ಮೋಹನ್‌ಕುಮಾರ್ ಅರ್ಜಿದಾರನ ಪರ ವಕೀಲ: ಅರ್ಜಿದಾರರ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಒಂದೊಮ್ಮೆ ಅವರು ನಿರಪರಾಧಿ ಎಂದು ಸಾಬೀತಾದರೆ, ಇಷ್ಟು ದಿನ ಜೈಲಿನಲ್ಲಿ ಕಳೆದ ಸಮಯ ಹಿಂದಿರುಗಿ ಬರುತ್ತದೆಯೆ? ಅಲ್ಲದೆ ಬಾಲಕಿಗೆ 7 ವರ್ಷ ವಯಸ್ಸಾಗಿದ್ದು, ಈಗ ಕೃತ್ಯದ ಬಗ್ಗೆ ವಿಚಾರಣೆ ನಡೆಸಿದರೆ ಬಾಲಕಿಯ ಮನಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.