ಬೆಂಗಳೂರು: ಪ್ರತ್ಯೇಕ ರಾಜ್ಯದ ಕೂಗು ವಿರೋಧಿಸಿ ವಿನೂತನ ಪ್ರತಿಭಟನೆ
ಬೆಂಗಳೂರು, ಜು. 29: ‘ಪ್ರತ್ಯೇಕ ರಾಜ್ಯದ ಕೂಗನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜೋಳದ ರೊಟ್ಟಿ, ರಾಗಿಮುದ್ದೆ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ರವಿವಾರ ಇಲ್ಲಿನ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ವಾಟಾಳ್, ಯಾವುದೇ ಕಾರಣಕ್ಕೂ ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡಲು ಬಿಡುವುದಿಲ್ಲ. ಕರ್ನಾಟಕವನ್ನು ಓಡೆಯುವ ತಂತ್ರ ರಾಜ್ಯದಲ್ಲಿ ನಡೆಯದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷ ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ ಎಂದು ದೂರಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಆದರೆ, ಆ ನೆಪದಲ್ಲಿ ಪ್ರತ್ಯೇಕ ರಾಜ್ಯದ ಮಾತನಾಡುವುದು ಸರಿಯಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಚಾಮರಾಜನಗರದಿಂದ ಬೀದರ್ ವರೆಗೆ ಹೋರಾಟ ಮಾಡಲಾಗುವುದು ಎಂದರು.
ಉತ್ತರ ಕರ್ನಾಟಕಕ್ಕೆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಅದನ್ನು ಹೊರತುಪಡಿಸಿ ಪ್ರತ್ಯೇಕತೆಯ ವಿಚಾರವನ್ನು ಒಪ್ಪುವುದಿಲ್ಲ. ಅಖಂಡ ಕರ್ನಾಟಕ ಒಂದೆ ಎಂಬುದು ಬಾಂಧವ್ಯದ ಸಂಕೇತ. ಹೀಗಾಗಿ ವಿನೂತನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ಏಕೀಕರಣಕ್ಕಾಗಿ ಹಲವು ಮಹನೀಯರು ಹೋರಾಟ ನಡೆಸಿದ್ದಾರೆ. 3 ಕೋಟಿ ಜನ ಹೊರಗುಳಿದ್ದಿದ್ದಾರೆ. ರಾಜ್ಯದ ಹೊರಗಿರುವ ಕನ್ನಡಿಗರ ಜೀವನವನ್ನು ನೋಡಬೇಕು. ಅದು ಬಿಟ್ಟು ಒಡೆಯುವ ತಂತ್ರ ಸರಿಯಲ್ಲ. ಕರ್ನಾಟಕ ಎಂದೆಂದೂ ಅಖಂಡವಾಗಿಯೇ ಇರಬೇಕೆಂದು ಪ್ರತಿಪಾದಿಸಿದರು.