×
Ad

ಶಾಲಾ ಹಂತದಲ್ಲಿಯೆ ಪರಿಸರ ವಿಜ್ಞಾನದ ಬಗ್ಗೆ ಅರಿವು ಅಗತ್ಯ: ಕೇಂದ್ರ ಸಚಿವ ಅನಂತಕುಮಾರ್

Update: 2018-07-29 22:14 IST

ಬೆಂಗಳೂರು, ಜು.29: ವಿದ್ಯಾರ್ಥಿ ಹಂತದಲ್ಲಿಯೆ ಪರಿಸರ ವಿಜ್ಞಾನದ ಕುರಿತು ಅರಿವು ಹಾಗೂ ಆಸಕ್ತಿ ಬೆಳೆಸಿಕೊಳ್ಳುವುದರಿಂದ ತಮ್ಮ ಇಡೀ ಬದುಕನ್ನು ಪರಿಸರಕ್ಕೆ ಪೂರಕವಾಗಿ ಕಟ್ಟಿಕೊಳ್ಳಬಹುದು ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದರು.

ರವಿವಾರ ನಗರದ ಗವಿಪುರಂನಲ್ಲಿ ಅದಮ್ಯ ಚೇತನ ಹಾಗೂ ಐಐಎಸ್ಸಿ ಪ್ರಕೃತಿ ವಿಜ್ಞಾನ ಅರಿವು ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹೀಗಾಗಿ ಶಾಲಾ ಮಕ್ಕಳಿಗೆ ಶಾಲಾ ಅವಧಿಯಲ್ಲಿಯೆ ಪ್ರಕೃತಿ ಕುರಿತು ಜ್ಞಾನ ಮೂಡಿಸುವುದು ಉತ್ತಮವೆಂದು ಅಭಿಪ್ರಾಯಿಸಿದರು.

ಪ್ರಕೃತಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2017ರಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆಗೂಡಿ ಅದಮ್ಯ ಚೇತನ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪ್ರಕೃತಿ ವಿಜ್ಞಾನದ ಅರಿವು ಕುರಿತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮದ ಅಂಗವಾಗಿ ಪರಿಸರದ ವಿಜ್ಞಾನದ ಕುರಿತ ಪರೀಕ್ಷೆಗಳನ್ನು ಏರ್ಪಡಿಸುತ್ತೇವೆ. ಅದರಲ್ಲಿ ಉತ್ತೀರ್ಣರಾದ ಶಾಲೆಯ ಮಕ್ಕಳಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ವತಿಯಿಂದ 4 ತಿಂಗಳ ಅವಧಿಯ ಇಂಟರ್ನ್‌ಶಿಪ್ ನ್ನು ಒದಗಿಸಲಾಗಿತ್ತದೆ ಎಂದು ಅವರು ತಿಳಿಸಿದರು.

2018ನೆ ಸಾಲಿನ ಪ್ರಕೃತಿ ವಿಜ್ಞಾನ ಕಾರ್ಯಕ್ರಮವು ಆ.18ರವರೆಗೆ ನಡೆಯಲಿದೆ. ಎಲ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಸಬಹುದಾಗಿದೆ. ನಮ್ಮ ಸಂಸ್ಥೆಯ ಕಾರ್ಯಕರ್ತರು ಶಾಲೆಗಳಿಗೆ ಭೇಟಿ ನೀಡಲಿದ್ದು ನೋಂದಣಿ ಮಾಡಿಕೊಳ್ಳಲಿದ್ದಾರೆ. ಅಲ್ಲದೆ ಸ್ವತಃ ವಿದ್ಯಾರ್ಥಿಗಳೇ ಅದಮ್ಯ ಚೇತನ ಸಂಸ್ಥೆಯ ಕಚೇರಿಗೆ ಭೇಟಿ ನೀಡಿಯೂ ನೊಂದಣಿಯಾಗಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿಸಿದ ವಿದ್ಯಾರ್ಥಿಗಳಿಗೆ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಅದಮ್ಯ ಚೇತನದ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 08026620403 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿಐಐನ ಉಪಾಧ್ಯಕ್ಷ ಅಮನ್ ಚೌಧರಿ, ಕಾಸಿಯಾದ ಉಪಾಧ್ಯಕ್ಷ ರಾಜು, ಶಾಸಕ ರವಿಸುಬ್ರಮಣ್ಯ, ಕಾಸಿಯಾದ ಮಾಜಿ ಅಧ್ಯಕ್ಷರಾದ ಕೆ ದಿಕ್ಷಿತ್, ಕಾಸಿಯಾದ ಜಂಟಿ ಕಾರ್ಯದರ್ಶಿ ಎನ್ ಸುರೇಶ್ ಸಾಗರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News