ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತೊಬ್ಬ ಬಲೆಗೆ ಬಿದ್ದರೆ ಪಿಸ್ತೂಲು ಪತ್ತೆ

Update: 2018-07-30 14:52 GMT

ಬೆಂಗಳೂರು, ಜು.30: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್(ಎಸ್‌ಐಟಿ) ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪುವ ಲಕ್ಷಣ ಕಂಡು ಬರುತ್ತಿದ್ದು, ಮತ್ತೊಬ್ಬ ಆರೋಪಿ ಸಿಕ್ಕಿಬಿದ್ದರೆ ಹತ್ಯೆ ಕೃತ್ಯಕ್ಕೆ ಬಳಸಿದ ಪಿಸ್ತೂಲು ಪತ್ತೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

2017ರ ಸೆಪ್ಟೆಂಬರ 5 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ವಗೃಹದ ಬಳಿಯೇ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಂದಿನಿಂದ ಇದುವರೆಗೂ ಸಿಟ್ ತನಿಖಾಧಿಕಾರಿಗಳು, ಕೃತ್ಯಕ್ಕೆ ಬಳಸಿದ ಪಿಸ್ತೂಲು, ಬೈಕ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಇದೀಗ ಪ್ರಮುಖ ಆರೋಪಿಗಳ ಬಂಧನದಿಂದ ಹಲವು ಮಾಹಿತಿ ಸಂಗ್ರಹ ಮಾಡಲಾಗಿದೆ.

ಯಾರು ಆರೋಪಿಗಳು?: ಪ್ರಕರಣದ ಪ್ರಮುಖ ಆರೋಪಿ ಹಾಗೂ ಗುಂಡಿನ ದಾಳಿ ನಡೆಸಿದ ಎನ್ನಲಾದ ವಿಜಯಪುರದ ಪರಶುರಾಮ್ ವಾಗ್ಮೋರೆ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಬಂಧನದಿಂದ ಮತ್ತೊಬ್ಬ ಆರೋಪಿಯ ಬಳಿಯೇ ಪಿಸ್ತೂಲು ಇದೆ ಎನ್ನುವ ಮಾಹಿತಿ ದೊರೆತಿದೆ. ಅಲ್ಲದೆ, ಸೆಪ್ಟೆಂಬರ್ 5ರ ರಾತ್ರಿ ಗೌರಿ ಲಂಕೇಶ್ ಹತ್ಯೆ ನಡೆದ ಬಳಿಕ ನಗರದ ಸಿಗೇಹಳ್ಳಿಯ ಮನೆಯೊಂದರಲ್ಲಿ ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಹಾಗೂ ಮತ್ತೊಬ್ಬ ಆರೋಪಿ ಇದ್ದರು. ಸ್ವಲ್ಪ ಸಮಯದ ನಂತರ ಮತ್ತೊಬ್ಬ ಪಿಸ್ತೂಲು ತೆಗೆದುಕೊಂಡು ಹೊರಟಾಗ, ಇನ್ನುಳಿದವರು, ಕಾರಿನ ಮೂಲಕ ಮನೆಗಳಿಗೆ ತಲುಪಿದರು ಎಂದು ತಿಳಿದುಬಂದಿದೆ.  

ಅದೇ ರೀತಿ, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಮಹಾರಾಷ್ಟ್ರದ ಅಮೋಲ್ ಕಾಳೆ, ಹತ್ಯೆ ದಿನದಂದು ಯಶವಂತಪುರದ ಕ್ರಾಸ್ ಬಳಿಯಿದ್ದ. ಇನ್ನು ತುಮಕೂರಿನ ಎಚ್.ಎಲ್.ಗಣೇಶ್, ಆರೋಪಿಗಳ ಬಟ್ಟೆಗೆ ಬೆಂಕಿ ಹಚ್ಚಿ ಸಾಕ್ಷ ನಾಶ ಮಾಡಿದ್ದನು ಎಂದು ಹೇಳಲಾಗುತ್ತಿದೆ. ಪ್ರರಕಣ ಸಂಬಂಧ ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಹೆಸರು ‘ದಾದಾ’ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ, ಈತನ ಬಂಧನದಿಂದ ಗೌರಿ ಲಂಕೇಶ್ ಹತ್ಯೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪುವ ಸಾಧ್ಯತೆಗಳಿದ್ದು, ಇವರ ಹಿಂದಿರುವ ಪ್ರಮುಖರು ಬೆಳಕಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News