ಲಾಕರ್‌ನಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣ: ಬಿಜೆಪಿ ಮುಖಂಡನ ಮನೆ ಮೇಲೆ ಐಟಿ ದಾಳಿ

Update: 2018-07-30 14:57 GMT

ಬೆಂಗಳೂರು, ಜು.30: ಬೌರಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಬಹುಕೋಟಿ ಸಂಪತ್ತು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಮುಖಂಡನ ಮನೆಯ ಮೇಲೆಯೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಗರದ ಕೋರಮಂಗಲದಲ್ಲಿರುವ ಬಿಜೆಪಿ ಮುಖಂಡ ಪ್ರಸಾದ್ ರೆಡ್ಡಿ ಎಂಬವರ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಈತ ಶಾಂತಿನಗರ ಹೌಸಿಂಗ್ ಕಾರ್ಪೋರೇಷನ್ ಹಗರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಲಾಕರ್‌ನಲ್ಲಿ ದೊರೆತ ಆಸ್ತಿ ಪತ್ರಗಳು ಬಿಜೆಪಿಯ ನಾಯಕರಿಗೆ ಸೇರಿದವು ಎಂಬ ಮಾಹಿತಿ ಇತ್ತು. ಆದರಂತೆ ಈಗ ಅಲ್ಲಿ ಸಿಕ್ಕಿರುವ ಆಸ್ತಿ ಪತ್ರಗಳು ಪ್ರಸಾದ್ ರೆಡ್ಡಿಗೆ ಸೇರಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ಆದ್ದರಿಂದ, ಆದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯವರ ಆಸ್ತಿ ಪತ್ರಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸಾದ್‌ ರೆಡ್ಡಿ ಜೊತೆಗೆ ಉದ್ಯಮಿ ಅವಿನಾಶ್ ಅಗರ್ ವಾಲ್ ವ್ಯವಹಾರ ಮಾಡಿದ್ದರು. ಅವಿನಾಶ್ ಮಾಲಕತ್ವದ ಅನುಷ್ಕಾ ಎಸ್ಟೇಟ್‌ನಿಂದ ಪ್ರಸಾದ್‌ರೆಡ್ಡಿಗೆ ಸೇರಿದ ಹಲವು ನಿವೇಶನಗಳನ್ನು ಖರೀದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಶೋಕಾಸ್ ನೋಟಿಸ್
ಬೌರಿಂಗ್ ಇನ್ಸ್‌ಟಿಟ್ಯೂಟ್ ಸದಸ್ಯರು, ಉದ್ಯಮಿ ಅವಿನಾಶ್ ಅಗರ್‌ವಾಲ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕ್ಲಬ್‌ನ ಹೆಸರು ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News